ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಪಾಕ್ ಪಂದ್ಯ ಬಾಯ್ಕಾಟ್! ಕೊನೆಗೂ ಮೌನ ಮುರಿದ ಟೀಂ ಇಂಡಿಯಾ ಹೇಳಿದ್ದೇನು...?
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಬಹು ನಿರೀಕ್ಷಿತ ಭಾರತ- ಪಾಕಿಸ್ತಾನ ನಡುವಿನ ಪಂದ್ಯ ರವಿವಾರ ನಡೆಯಲಿದೆ. ಬದ್ಧ ವೈರಿಗಳ ನಡುವಿನ ಕಾದಾಟ ವೀಕ್ಷಿಸಲು ಪ್ರಪಂಚದಾದ್ಯಂತ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿರುವಂತೆಯೇ ಪಾಕ್ ಜೊತೆ ಆಡಬಾರದೆನ್ನುವ ಕೂಗು ಕೂಡ ಹೆಚ್ಚಾಗಿದೆ.
ಇತ್ತೀಚೆಗೆ ಇಂಗ್ಲೆಂಡ್ ನಲ್ಲಿ ಲೆಜೆಂಡ್ಸ್ ಕ್ರೀಡಾಕೂಟ ಆಯೋಜಿಸಲಾಗಿತ್ತು. ಭಾರತದ ಹಿರಿಯರ ತಂಡ, ಪಾಕಿಸ್ತಾನದ ತಂಡದ ಜೊತೆ ಆಡಲು ಎರಡು ಬಾರಿ ನಿರಾಕರಿಸಿತ್ತು. ಅದೇ ರೀತಿ, ಏಷ್ಯಾ ಕಪ್ ಪಂದ್ಯದಲ್ಲೂ ಆಡಬಾರದು ಎನ್ನುವ ಕೂಗು ಹೆಚ್ಚಾಗ ತೊಡಗಿದೆ.
ಪಹಲ್ಗಾಮ್ ದಾಳಿಯ ನಂತರ, ಭಾರತವು ಪಾಕಿಸ್ತಾನದ ವಿರುದ್ದ ಬಹುತೇಕ ಹೆಚ್ಚಿನ ಸಂಬಂಧವನ್ನು ಕಡಿದುಕೊಂಡಿದೆ. ಉಗ್ರರ ದಾಳಿಯಲ್ಲಿ ಹುತಾತ್ಮರಾದ ಕುಟುಂಬದವರೂ, ಶತ್ರು ರಾಷ್ಟ್ರದ ಮಧ್ಯೆ ಯಾಕೆ ಕ್ರೀಡಾ ಸಂಬಂಧ ಎಂದು ಪ್ರಶ್ನಿಸುತ್ತಿದ್ದಾರೆ. ನ್ಯಾಷನಲ್ ಸೆಂಟಿಮೆಂಟ್ ಗಿಂತ, ಪಂದ್ಯ ಹೆಚ್ಚಾಯಿತೇ ಎನ್ನುವ ಕೂಗಿಗೆ, ಟೀಂ ಇಂಡಿಯಾ ಕೊನೆಗೂ ಮೌನ ಮುರಿದಿದೆ.
ನಮ್ಮ ಹೊರಗಡೆ ಕೇಳಿ ಬರುತ್ತಿರುವ ಸದ್ದಿಗೆ ನಾವು ತಲೆಕೆಡಿಸಿಕೊಳ್ಳುತ್ತಿಲ್ಲ. ನಮ್ಮ ತಂಡದ ಗಮನ ಏನಿದ್ದರೂ ನಾಳೆಯ ಪಂದ್ಯದ ಮೇಲೆ. ಪಾಕಿಸ್ತಾನದ ವಿರುದ್ದ ಆಡುವ ಬಗ್ಗೆ ನಮ್ಮ ಗಮನ ನೆಟ್ಟಿದೆ ಎಂದು ಟೀಂ ಇಂಡಿಯಾದ ಸಹಾಯಕ ಕೋಚ್ ಸಿತಾಂಶು ಕೋಟಕ್ ಹೇಳಿದ್ದಾರೆ.
ರವಿವಾರ ನಡೆಯುವ ಪಂದ್ಯವನ್ನು ಚೆನ್ನಾಗಿ ಆಡಿ, ಪಂದ್ಯವನ್ನು ಗೆಲ್ಲಬೇಕು ಎನ್ನುವುದಷ್ಟೇ ನಮ್ಮ ಗುರಿ ಎಂದು ಕೋಟಕ್ ಹೇಳಿದ್ದಾರೆ. ಆಪರೇಷನ್ ಸಿಂಧೂರ್ ನಂತರ, ಪಾಕಿಸ್ತಾನದ ಜೊತೆಗೆ ಪಂದ್ಯ ಆಡುತ್ತಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ ಎನ್ನುವ ಪ್ರಶ್ನೆಗೆ ಕೋಟಕ್ ಈ ರೀತಿ ಉತ್ತರಿಸಿದ್ದಾರೆ.
" ಹೊರಗಡೆ ಬಹಳಷ್ಟು ಚರ್ಚೆಗಳು ನಡೆಯುತ್ತಿದೆ ಎನ್ನುವುದನ್ನು ನಾವು ಬಲ್ಲೆವು. ಹೊರಗಿನ ಮಾತುಗಳಿಗೆ ಕಿವಿಕೊಟ್ಟರೆ ನಾವು ಇಲ್ಲಿ ಲಯವನ್ನು ಕಳೆದುಕೊಳ್ಳಬೇಕಾಗುತ್ತದೆ. ನಾವು ಆಡಲು ಬಂದ ಮೇಲೆ, ನಮ್ಮ ಗಮನ ಆಡುವುದರ ಮೇಲಿರಬೇಕು. ಬೇರೇನೂ ತಲೆಯಲ್ಲಿ ಇರಬಾರದು, ಕ್ರಿಕೆಟ್ ಆಡುವುದಷ್ಟೇ ನಮ್ಮ ಮುಂದೆ ಇರುವ ಗುರಿ" ಎಂದು ಸಹಾಯಕ ಕೋಚ್ ಕೋಟಕ್ ಹೇಳಿದ್ದಾರೆ.
ಪಾಕಿಸ್ತಾನದೊಂದಿಗೆ ಪಂದ್ಯ ಆಡುತ್ತಿರುವುದಕ್ಕೆ ಬಿಸಿಸಿಐ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ಎದುರಾಗುತ್ತಿದೆ. ಭಾರತ ದ್ವಿಪಕ್ಷೀಯ ಸರಣಿಗೆ ಅನುಮತಿಯನ್ನು ನಿರಾಕರಿಸಿತ್ತು. ಆದರೆ, ಹಲವು ರಾಷ್ಟ್ರಗಳು ಈ ಟೂರ್ನಮೆಂಟ್ ನಲ್ಲಿ ಆಡುತ್ತಿರುವುದರಿಂದ ಅನುಮತಿಯನ್ನು ನೀಡಿತ್ತು.