ಜಾತಿ ಗಣತಿ; ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಉಲ್ಲೇಖಿಸುವಂತೆ ಮಹಾಸಭಾ ಸೂಚನೆ: ಬಿಜೆಪಿ ಲಿಂಗಾಯತ ನಾಯಕರ ವಿರೋಧ
ಬೆಂಗಳೂರು: ಸೋಮವಾರದಿಂದ ರಾಜ್ಯದಾದ್ಯಂತ ಜಾತಿಗಣತಿ ಆರಂಭವಾಗುತ್ತಿದೆ. ಈಮಧ್ಯೆ, ಲಿಂಗಾಯತ ಸಮುದಾಯದವರಲ್ಲಿ ತಾವು ಏನೆಂದು ಬರೆಸಬೇಕು, ಧರ್ಮದ ಕಾಲಂನಲ್ಲಿ ಬರೆಸಬೇಕಾ? ಜಾತಿಯ ಕಾಲಂನಲ್ಲಿ ಬರೆಸಬೇಕಾ ಎಂಬ ಗೊಂದಲ ಸೃಷ್ಟಿಯಾಗಿದೆ. ಧರ್ಮದ ಕಾಲಂನಲ್ಲಿರುವ ಇತರೆ ಕಾಲಂನಲ್ಲಿ ವೀರಶೈವ-ಲಿಂಗಾಯತ ಎಂದು ಬರೆಸುವಂತೆ ಮಹಾಸಭಾ ಸೂಚನೆ ನೀಡಿದೆ. ಆದರೆ ಈಗ ಮಹಾಸಭಾದ ಈ ನಿಲುವಿಗೆ ಬಿಜೆಪಿಯ ಲಿಂಗಾಯತ ನಾಯಕರು ಬಿನ್ನ ನಿಲುವು ತಾಳಿದ್ದಾರೆ.
ಜಾತಿಗಣತಿಯಲ್ಲಿ ಧರ್ಮದ ಕಾಲಂ ನಂಬರ್ 8ರಲ್ಲಿ 11 ಧರ್ಮಗಳನ್ನು ಗುರುತಿಸಿ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಹಿಂದೂ, ಇಸ್ಲಾಂ, ಕ್ರೈಸ್ತ, ಜೈನ್, ಸಿಖ್ ಎಂದು ನಮೂದಿಸಲಾಗಿದೆ. ಇದರಲ್ಲಿ ಕೊನೆಯ ಕಾಲಂನಲ್ಲಿ ‘ಇತರೆ’ ಎಂದೂ ಉಲ್ಲೇಖಿಸಲಾಗಿದೆ. ಇತರೆ ಕಾಲಂನಲ್ಲಿ ಧರ್ಮದ ಹೆಸರನ್ನು ಬರೆಸಬಹುದು. ಈ ಕಾಲಂನಲ್ಲಿ ವೀರಶೈವ ಲಿಂಗಾಯತ ಧರ್ಮ ಎಂದು ಬರೆಸುವಂತೆ ವೀರಶೈವ ಮಹಾಸಭಾ ಸೂಚನೆ ನೀಡಿದೆ. ಆದರೆ, ಈ ನಿರ್ಧಾರವನ್ನು ಬಿಜೆಪಿ ಲಿಂಗಾಯತ ನಾಯಕರು ವಿರೋಧಿಸಿದ್ದಾರೆ.
ಯಡಿಯೂರಪ್ಪ ನೇತೃತ್ವದ ಬಿಜೆಪಿ ಲಿಂಗಾಯತ ನಾಯಕರ ಸಭೆಯಲ್ಲಿ ವಿರೋಧ
ಬೆಂಗಳೂರಿನಲ್ಲಿ ಮಂಗಳವಾರ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಯತ ಲಿಂಗಾಯ ನಾಯಕರ ಸಭೆ ನಡೆಸಲಾಗಿದ್ದು, ವೀರಶೈವ ಲಿಂಗಾಯತ ಸಮುದಾಯವನ್ನು ಪ್ರತ್ಯೇಕ ಧರ್ಮದಲ್ಲಿ ಗುರುತಿಸುವುದಕ್ಕೆ ವಿರೋಧ ವ್ಯಕ್ತವಾಗಿದೆ. ಹಿಂದೂ ಧರ್ಮದ ಕಾಲಂನ ಅಡಿಯಲ್ಲೇ ಲಿಂಗಾಯತ ಎಂದು ಬರೆಸಬೇಕು. ಈ ಬಗ್ಗೆ ಲಿಂಗಾಯತರಲ್ಲಿ ಜಾಗೃತಿ ಮೂಡಿಸಬೇಕು ಹಾಗೂ ಮಠಾಧೀಶರನ್ನು ಮನವೊಲಿಸಬೇಕು ಎಂದು ನಿರ್ಧರಿಸಲಾಗಿದೆ. ಸಭೆಯ ಬಳಿಕ ಬಿಜೆಪಿ ನಾಯಕರು ಸಚಿವ ಮತ್ತು ವೀರಶೈವ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಈಶ್ವರ್ ಖಂಡ್ರೆಯವರನ್ನು ಭೇಟಿಯಾಗಿದ್ದಾರೆ. ಗೊಂದಲ ನಿವಾರಿಸುವ ಬಗ್ಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶ್ವರ್ ಖಂಡ್ರೆ, ನಮ್ಮ ಸರ್ಕಾರ ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿಲ್ಲ ಎಂದರು. ಅಷ್ಟೇ ಅಲ್ಲ, ಈಗಾಗೇ ಗೊಂದಲ ಇದೆ, ಮತ್ತಷ್ಟು ಗೊಂದಲ ಸೃಷ್ಟಿಸುವುದು ಬೇಡ ಎಂದಿದ್ದಾರೆ.