ಬೀದರ್ ಭಾರೀ ಮಳೆ; ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರಿಂದ ಕ್ಷಿಪ್ರ ಕ್ರಮ: ಮಂಗಳವಾರ ಮುಖ್ಯಮಂತ್ರಿಯಿಂದ ವೈಮಾನಿಕ ಸಮೀಕ್ಷೆ
ಬೀದರ್: ಬೀದರ್ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಳೆಗಳು, ಮನೆಗಳು ಹಾಗೂ ಮೂಲಸೌಕರ್ಯಗಳಿಗೆ ತೀವ್ರ ಹಾನಿ ಉಂಟಾಗಿದೆ. ರೈತರ ಜೀವನ ಸಂಪೂರ್ಣ ಸಂಕಷ್ಟಕ್ಕೀಡಾದ ಹಿನ್ನಲೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವ ರಹೀಂ ಖಾನ್ ಅವರ ಜೊತೆಯಲ್ಲಿ ಭೇಟಿಯಾಗಿ ಬೀದರ್ ಉಸ್ತುವಾರಿ ಸಚಿವರಾದ ಈಶ್ವರ್ ಬಿ ಖಂಡ್ರೆಯವರು ಭೇಟಿ ಮಾಡಿ ವೈಮಾನಿಕ ಸಮೀಕ್ಷೆ ನಡೆಸಿ ತುರ್ತು ಪರಿಹಾರ ಹಾಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಮನವಿ ಸಲ್ಲಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಖಂಡ್ರೆಯವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಸೆಪ್ಟೆಂಬರ್ 30ರಂದು ವೈಮಾನಿಕ ಸಮೀಕ್ಷೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಹವಾಮಾನ ಬದಲಾವಣೆ ಹಾಗೂ ಜಾಗತಿಕ ತಾಪಮಾನ ಏರಿಕೆಯ ಪರಿಣಾಮವಾಗಿ ಈ ಬಾರಿ ಋತುಮಾನಗಳಲ್ಲಿ ದೊಡ್ಡ ಏರುಪೇರಾಗಿದ್ದು, ಅದರ ಹೊಡೆತ ಗಡಿ ಜಿಲ್ಲೆ ಬೀದರ್ ಮೇಲೂ ಬಿದ್ದಿದೆ. ಜಿಲ್ಲೆಯ ಶೇ.75ರಷ್ಟು ಜನರ ಬದುಕು ಕೃಷಿಯನ್ನೇ ಅವಲಂಬಿಸಿದ್ದು, 4.31 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿತ್ತು. ಆಗಸ್ಟ್‌ನಲ್ಲಿ ಸುರಿದ ಅನಿರೀಕ್ಷಿತ ಮಳೆಯಿಂದಲೇ ಶೇ.25ರಷ್ಟು ಬೆಳೆ ಹಾನಿಯಾಗಿತ್ತು. ಈಗ ಸೆಪ್ಟೆಂಬರ್‌ನಲ್ಲಿ ಸುರಿದ ನಿರಂತರ ಮಳೆಯಿಂದ ಹೆಸರು, ಉದ್ದು, ತೊಗರಿ, ಸೋಯಾ ಸೇರಿ ಎಲ್ಲಾ ಬೆಳೆಗಳೂ ಹಾನಿಗೊಳಗಾಗಿವೆ.
ಪ್ರವಾಹದಿಂದ ಸೇತುವೆಗಳು ಕುಸಿದು ಸಂಚಾರ ಸಂಪರ್ಕ ಕಡಿತವಾಗಿದೆ. ಅನೇಕ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿ ಜನರು ಅಂಧಕಾರದಲ್ಲಿ ಜೀವನ ನಡೆಸುತ್ತಿದ್ದಾರೆ. ಶಾಲೆ, ಅಂಗನವಾಡಿ, ಆಸ್ಪತ್ರೆ ಹಾಗೂ ಸರ್ಕಾರಿ ಕಚೇರಿಗಳ ಕಟ್ಟಡಗಳು ಸೋರುವಂತಾಗಿದೆ. ಫಲವತ್ತಾದ ಮಣ್ಣು ಕೊಚ್ಚಿಹೋಗಿ ಭೂಮಿ ಸವಳು ಜವಳಾಗಿದೆ.
ಈ ಎಲ್ಲಾ ಪರಿಸ್ಥಿತಿಯನ್ನು ಮುಖ್ಯಮಂತ್ರಿಗಳಿಗೆ ವಿವರಿಸಿ, ರೈತರ ಸಂಕಷ್ಟ ನಿವಾರಣೆಗೆ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ವಿನಂತಿಸಿದ್ದೇನೆ. ನಮ್ಮ ಜಿಲ್ಲೆಯ ಜನರ ಪರವಾಗಿ ಶೀಘ್ರದಲ್ಲೇ ನೆರವು ಹಾಗೂ ವಿಶೇಷ ಪ್ಯಾಕೇಜ್ ಘೋಷಿಸಲಾಗುವುದು ಎಂಬ ಭರವಸೆ ನನಗಿದೆ ಎಂದು ಸಚಿವ ಖಂಡ್ರೆಯವರು ಅಭಿಪ್ರಾಯ ಪಟ್ಟಿದ್ದಾರೆ..