ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ; ಶ್ರೀ ಕೃಷ್ಣ ಮಠಕ್ಕೆ ಭಕ್ತರ ದಂಡು: ಮೆರುಗು ತಂದ ನೂರಾರು ಮುದ್ದು ಕೃಷ್ಣರು
ಉಡುಪಿ: ಶ್ರೀ ಕೃಷ್ಣ ಮಠದಲ್ಲಿಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ. ಪೊಡವಿಗೊಡೆಯನ ಜನ್ಮದಿನವನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವದಿಂದ ನೆರವೇರಿಸಲಾಗುತ್ತಿದೆ. ಬೆಳಗ್ಗಿನಿಂದಲೇ ಭಕ್ತರು ಮಠಕ್ಕೆ ಆಗಮಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಪರ್ಯಾಯ ಪುತ್ತಿಗೆ ಮಠಾಧೀಶರು ವಿಶೇಷ ಪೂಜೆ ನೆರವೇರಿಸಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಉಂಡೆ ಚಕ್ಕುಲಿಗಳು ಸಿದ್ಧಗೊಂಡಿದ್ದು, ಭಕ್ತರಿಗೆ ಹಂಚಲಾಗುತ್ತದೆ.
ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ ನಡೆದರೆ, ಸೆ.15ರಂದು ಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ಸಂಪನ್ನಗೊಳ್ಳಲಿದೆ. ಮೊಸರು ಕುಡಿಕೆ ಉತ್ಸವಕ್ಕೆ ರಥಬೀದಿಯ ಸುತ್ತಲೂ ತ್ರಿಕೋನಾಕೃತಿಯ ಗುರ್ಜಿಗಳನ್ನು ನಿರ್ಮಾಣ ಮಾಡಲಾಗಿದೆ.
ಬೆಳಗ್ಗೆ 10 ಗಂಟೆಗೆ ರಾಜಾಂಗಣದಲ್ಲಿ ಮುದ್ದು ಕೃಷ್ಣ ಮತ್ತು ಮುದ್ದುರಾಧೆ ವೇಷ ಸ್ಪರ್ಧೆಗಳಿಗೆ ಪರ್ಯಾಯ ಪುತ್ತಿಗೆ ಮಠಾಧೀಶರು ಚಾಲನೆ ನೀಡಿದರು. ನೂರಾರು ಮುದ್ದು ಕೃಷ್ಣ ಮತ್ತು ಮುದ್ದುರಾಧೆ ವೇಷಧಾರಿಗಳು ರಾಜಾಂಗಣದಲ್ಲಿ ಪರ್ಯಾಯ ಸ್ವಾಮೀಜಿಗಳ ಹತ್ತಿರ ಕುಳಿತು ಫೋಟೋ ತೆಗೆಸಿಕೊಂಡರು. ಪರ್ಯಾಯ ಪುತ್ತಿಗೆ ಸ್ವಾಮೀಜಿ ಮತ್ತು ಕಿರಿಯ ಶ್ರೀಗಳು ಪುಟಾಣಿಗಳನ್ನು ಎತ್ತಿ ಮುದ್ದಾಡಿದರು. ಬಳಿಕ ರಾಜಾಂಗಣ ಮಧ್ವಮಂಟಪ ಮತ್ತು ಗೀತಾ ಮಂದಿರದಲ್ಲಿ ಸ್ಪರ್ಧೆಗಳು ನಡೆದವು.
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉಡುಪಿ ಮಾತ್ರವಲ್ಲದೆ, ನಾಡಿನ ಹಲವು ಭಾಗಗಳಿಂದ ಭಕ್ತಾದಿಗಳು ಕೃಷ್ಣಮಠಕ್ಕೆ ಆಗಮಿಸುತ್ತಿದ್ದಾರೆ. ಇಂದು ಭಕ್ತರು ಉಪವಾಸದಲ್ಲಿ ಇರಲಿದ್ದು, ತಡರಾತ್ರಿ ಕೃಷ್ಣನಿಗೆ ಅರ್ಘ್ಯ ಪ್ರಧಾನ ನೆರವೇರಿದೆ. ಪರ್ಯಾಯ ಪುತ್ತಿಗೆ ಶ್ರೀಗಳು ತಡರಾತ್ರಿ ಅರ್ಘ್ಯ ಪ್ರದಾನ ಮಾಡಿದ ಬಳಿಕ ಭಕ್ತರಿಗೂ ಅವಕಾಶ ಕಲ್ಪಿಸಲಾಗಿದೆ.