ಮಲ್ಪೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಮಗುಚಿ ಮೀನುಗಾರ ಮೃತ್ಯು
ಉಡುಪಿ: ಮೀನುಗಾರಿಕೆಗೆ ತೆರಳಿದ್ದ ವೇಳೆ ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಮಲ್ಪೆಯಲ್ಲಿ ಬುಧವಾರ ನಡೆದಿದ್ದು, ಗುರುವಾರ ಮೃತದೇಹ ಪತ್ತೆಯಾಗಿದೆ.
ಸಾಸ್ತಾನ ಕೋಡಿತಲೆ ನಿವಾಸಿ ರಾಮ ಖಾರ್ವಿ ಮೃತ ಮೀನುಗಾರ. ಅವರ ಮೃತದೇಹ ಮಲ್ಪೆ ಲೈಟ್ ಹೌಸ್ ಬಳಿ ಗುರುವಾರ ದೊರಕಿದೆ.
ರಾಮ ಖಾರ್ವಿ ಅವರು ಕಳೆದ 25-30 ವರ್ಷಗಳಿಂದ ತಮ್ಮ ದೋಣಿಯಲ್ಲಿ ಒಬ್ಬರೇ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳುತಿದ್ದರು.
ಎಂದಿನಂತೆ ಸೆ.10ರಂದು ಕೂಡ ಮೀನುಗಾರಿಕೆಗೆ ತೆರಳಿದ್ದ ಇವರು ಮದ್ಯಾಹ್ನವಾದರೂ ಮನೆಗೆ ಬಂದಿರಲಿಲ್ಲ. ರಾಮ ಖಾರ್ವಿ ಅವರ ಮಗ ಅವರನ್ನು ಮೊಬೈಲ್ ಮೂಲಕ ಸಂಪರ್ಕ ಮಾಡಲು ಎಷ್ಟೇ ಪ್ರಯತ್ನಿಸಿದರೂ, ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಹಾಗಾಗಿ ಸಂಬಂಧಿಕರು ಹಾಗೂ ಸ್ನೇಹಿತರೊಂದಿಗೆ ಮಲ್ಪೆ ಗೆ ತೆರಳಿ ರಾತ್ರಿವರೆಗೆ ಹುಡುಕಾಟ ನಡೆಸಿದರೂ ಯಾವುದೇ ಕುರುಹು ಸಿಕ್ಕಿರಲಿಲ್ಲ.
ಮಾರನೇ ದಿನ, ಮಲ್ಪೆ ಲೈಟ್ ಹೌಸ್ ಬಳಿ ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಬಿದ್ದು, ರಾಮ ಖಾರ್ವಿ ಅವರು ಈಜಲು ಆಗದೆ ನೀರಲ್ಲಿ ಮುಳುಗಿ ಮೃತಪಟ್ಟಿರುವ ಮಾಹಿತಿ ಸಿಕ್ಕಿದೆ.
ಸ್ಥಳದಲ್ಲಿ ದೋಣಿ, ಇಂಜಿನ್, ಬಲೆ ಹಾಗೂ ಇತರ ಸಲಕರಣೆಗಳು ಸಿಕ್ಕಿದ್ದು ಸಂಪೂರ್ಣ ಹಾನಿಗೊಂಡಿವೆ.