ಕೊನೆಗೂ ಎರಡು ವರ್ಷಗಳ ನಂತರ ಸಂಘರ್ಷ ಪೀಡಿತ ಮಣಿಪುರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ! ಹೇಳಿದ್ದೇನು....?

ಕೊನೆಗೂ ಎರಡು ವರ್ಷಗಳ ನಂತರ ಸಂಘರ್ಷ ಪೀಡಿತ ಮಣಿಪುರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ! ಹೇಳಿದ್ದೇನು....?

ಇಂಫಾಲ್: 2023ರಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮೊದಲ ಬಾರಿಗೆ ಮಣಿಪುರಕ್ಕೆ ಭೇಟಿ ನೀಡಿದ್ದು, ಸಂಘರ್ಷದಲ್ಲಿ ಭಾಗಿಯಾಗಿರುವ ಎಲ್ಲಾ ಸಂಘಟನೆಗಳು "ಶಾಂತಿಯ ಮಾರ್ಗ ಆರಿಸಿಕೊಳ್ಳಬೇಕು" ಎಂದು ಮನವಿ ಮಾಡಿದ್ದಾರೆ.

ಎರಡು ವರ್ಷಗಳಿಗೂ ಹೆಚ್ಚು ಕಾಲ ಹಿಂಸಾಚಾರದಿಂದ ತತ್ತರಿಸಿದ ರಾಜ್ಯಕ್ಕೆ ಭೇಟಿ ನೀಡಲು ನಿರಾಕರಿಸಿದ ಪ್ರಧಾನಿ ಮೋದಿ ವಿರುದ್ಧ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದ್ದವು. ಕೊನೆಗೂ ಎರಡು ವರ್ಷಗಳ ನಂತರ ಇಂದು ಮಣಿಪುರಕ್ಕೆ ಭೇಟಿ ನೀಡಿದ ಪ್ರಧಾನಿ, ಈ ಪ್ರದೇಶದಲ್ಲಿ ಶಾಂತಿ ಪುನಃಸ್ಥಾಪಿಸಲು ತಮ್ಮ ಸರ್ಕಾರ "ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು" ಮಾಡುತ್ತದೆ ಎಂದು ಭರವಸೆ ನೀಡಿದರು.

ಕುಕಿ ಸಮುದಾಯದ ಭದ್ರಕೋಟೆಯಾದ ಚುರಚಂದ್‌ಪುರದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, "ಶಾಂತಿಯ ಹಾದಿಯಲ್ಲಿ ಮುಂದುವರಿಬೇಕು ಎಂದು ನಾನು ಎಲ್ಲಾ ಸಂಘಟನೆಗಳಿಗೆ ಮನವಿ ಮಾಡುತ್ತೇನೆ. ಇಂದು, ನಾನು ನಿಮ್ಮೊಂದಿಗಿದ್ದೇನೆ, ಭಾರತ ಸರ್ಕಾರ ಮಣಿಪುರದ ಜನರೊಂದಿಗೆ ಇದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ" ಎಂದರು.

"ಇತ್ತೀಚೆಗೆ ಬೆಟ್ಟಗಳು ಮತ್ತು ಕಣಿವೆಗಳಲ್ಲಿ, ವಿವಿಧ ಗುಂಪುಗಳೊಂದಿಗೆ ಒಪ್ಪಂದ ಮಾತುಕತೆಗಳು ನಡೆದಿವೆ ಎಂದು ನಾವು ತೃಪ್ತರಾಗಿದ್ದೇವೆ. ಇವು ಭಾರತ ಸರ್ಕಾರದ ಪ್ರಯತ್ನದ ಭಾಗವಾಗಿದ್ದು, ಸಂವಾದ, ಗೌರವ ಮತ್ತು ಪರಸ್ಪರ ತಿಳುವಳಿಕೆಗೆ ಪ್ರಾಮುಖ್ಯತೆ ನೀಡುತ್ತಾ ಶಾಂತಿಯನ್ನು ಸ್ಥಾಪಿಸುವ ಕೆಲಸ ಮಾಡುತ್ತೇವೆ" ಎಂದರು.

"ಮಣಿಪುರದಲ್ಲಿ ಜೀವನವನ್ನು ಮರಳಿ ಹಳಿಗೆ ತರಲು ಕೇಂದ್ರ ಸರ್ಕಾರ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಮನೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ, ನಮ್ಮ ಸರ್ಕಾರವು 7,000 ಹೊಸ ಮನೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತಿದೆ" ಎಂದು ಅವರು ಹೇಳಿದರು.

"ಮಣಿಪುರದ ಎಲ್ಲಾ ಜನಾಂಗೀಯ ಸಂಘಟನೆಗಳು ಪರಸ್ಪರ ದ್ವೇಷ ಭಾವನೆಯನ್ನು ತೊರೆದು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಒಟ್ಟಾಗಬೇಕು. ಪರಸ್ಪರ ಗೌರವ ಮತ್ತು ನಂಬಿಕೆಯ ಆಧಾರದ ಮೇಲೆ ಹೊಸ ಭವಿಷ್ಯ ಕಟ್ಟುವಲ್ಲಿ ಎಲ್ಲರೂ ಶ್ರಮಿಸಬೇಕು" ಎಂದು ಪಧಾನಿ ಮೋದಿ ಕರೆ ನೀಡಿದರು.

ಮಣಿಪುರದಲ್ಲಿ ಮೇ 2023ರಿಂದ, ಜನಾಂಗೀಯ ಹಿಂಸಾಚಾರ 260ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ಚುರಚಂದಪುರದ ಶಾಂತಿ ಮೈದಾನದಲ್ಲಿ ತಮ್ಮ ನಿಗದಿತ ಭಾಷಣಕ್ಕೂ ಮುನ್ನ, ಪ್ರಧಾನಿ ಮೋದಿ ಸಂತ್ರಸ್ತರ ಮಕ್ಕಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಮಕ್ಕಳಿಂದ ಹೂಗುಚ್ಛ ಮತ್ತು ವರ್ಣಚಿತ್ರವನ್ನು ಸ್ವೀಕರಿಸಿದರು.

ಮಕ್ಕಳಿಗೆ ಧೈರ್ಯ ತುಂಬಿದ ಪ್ರಧಾನಿ ಮೋದಿ, ಮಣಿಪುರವನ್ನು "ಧೈರ್ಯ ಮತ್ತು ದೃಢಸಂಕಲ್ಪದ ಭೂಮಿ" ಎಂದು ಕರೆದರು. "ಈಶಾನ್ಯ ರಾಜ್ಯದ ಚೈತನ್ಯವು ಭಾರತದ ಮಹಾನ್ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ" ಎಂದು ಹೇಳಿದರು.

Ads on article

Advertise in articles 1

advertising articles 2

Advertise under the article