ಹಿಂದೂ ಮಹಿಳೆಯ ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಂ ಯುವಕ!
ಬಿಲ್ವಾರಾ(ರಾಜಸ್ಥಾನ): ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಹಿಂದೂ ತಾಯಿಗೆ ಹಿಂದೂ ಪದ್ಧತಿಯಂತೆಯೇ ಅಂತ್ಯಕ್ರಿಯೆ ನೆರವೇರಿಸಿರುವ ಘಟನೆ ರಾಜಸ್ಥಾನದ ಬಿಲ್ವಾರಾದಲ್ಲಿ ನಡೆದಿದೆ. ತಾಯಿ ಚಿತೆಗೆ ಅಳುತ್ತಾ ಬೆಂಕಿ ಹಚ್ಚಿದ್ದಷ್ಟೇ ಅಲ್ಲದೆ, ಚಿತಾಭಸ್ಮವನ್ನು ತ್ರಿವೇಣಿ ಸಂಗಮದಲ್ಲಿ ಹಾಕುವುದಾಗಿ ಹೇಳಿದ್ದಾರೆ.
ಇಷ್ಟಕ್ಕೂ ಮುಸ್ಲಿಂ ವ್ಯಕ್ತಿ ಅಸ್ಗರ್ ಅಲಿ ಮೃತ ಶಾಂತಿ ದೇವಿಯ ನಿಜವಾದ ಮಗ ಅಲ್ಲ, ದತ್ತು ಪುತ್ರನೂ ಅಲ್ಲ. ಆದರೂ ಮಗನಿಗಿಂತ ಹೆಚ್ಚು. ತಾಯಿ ಮತ್ತು ಮಗನ ನಡುವಿನ ಈ ವಿಶಿಷ್ಟ ಸಂಬಂಧವನ್ನು ಜನರು ಹೊಗಳುತ್ತಿದ್ದಾರೆ. ಈತ ಮಗನ ನಿಜವಾದ ಕರ್ತವ್ಯವನ್ನು ಪೂರೈಸಿದ್ದಾರೆ. 42 ವರ್ಷದ ಅಸ್ಗರ್ ಅಲಿ ಮಣಿಯಾರಿಯ ಜಂಗಿ ಮೊಹಲ್ಲಾದಲ್ಲಿ ಒಂದು ಸಣ್ಣ ಅಂಗಡಿಯನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ.
67 ವರ್ಷದ ಶಾಂತಿದೇವಿ ಎಂಬುವವರು ಅಲ್ಲೇ ಹತ್ತಿರದಲ್ಲಿ ವಾಸವಿದ್ದರು. ಎರಡೂ ಕುಟುಂಬಗಳು 30 ವರ್ಷಗಳಿಂದ ಪರಸ್ಪರ ತಿಳಿದಿದ್ದವು.ನಾವು ಯಾವಾಗಲೂ ಒಂದು ಕುಟುಂಬದಂತೆ ಒಟ್ಟಿಗೆ ವಾಸಿಸುತ್ತಿದ್ದೆವು. 2010 ರಲ್ಲಿ ಅವರ ಪತಿಯ ಮರಣದ ನಂತರ, ಶಾಂತಿ ದೇವಿ ತಮ್ಮ ಮಗನೊಂದಿಗೆ ನಮ್ಮ ಪಕ್ಕದ ಮನೆಗೆ ಬಂದಿದ್ದರು. ನಮ್ಮ ಎರಡೂ ಕುಟುಂಬಗಳು ಸಲೀಂ ಖುರೇಷಿ ಅವರ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದವು.
ತನ್ನ ಕುಟುಂಬವು ಮೊದಲ ಮಹಡಿಯಲ್ಲಿ ಮತ್ತು ಶಾಂತಿ ದೇವಿ ನೆಲ ಮಹಡಿಯಲ್ಲಿ ವಾಸಿಸುತ್ತಿದ್ದರು. ನಂತರ 2017 ರಲ್ಲಿ ನನ್ನ ತಂದೆ ನಿಧನರಾದರು. ಆಗಲೂ ಅವರು ನನ್ನ ತಾಯಿಯನ್ನು ಒಂಟಿಯಾಗಿ ಬಿಡಲಿಲ್ಲ. ಅವರು ಸಹೋದರಿಯಂತೆ ಅವರೊಂದಿಗೆ ನಿಂತಿದ್ದರು. 2018ರಲ್ಲಿ ಕಾಡು ಪ್ರಾಣಿಯೊಂದು ಶಾಂತಿ ದೇವಿ ಮಗನ ಮೇಲೆ ದಾಳಿ ಮಾಡಿತ್ತು. ಆಗ ಅವರ ಮಗ ಕೂಡ ತೀರಿಕೊಂಡಿದ್ದರು.
ಅಂದಿನಿಂದ ಶಾಂತಿ ದೇವಿ ನಮ್ಮೊಂದಿಗೆ ವಾಸಿಸಲು ಆರಂಭಿಸಿದ್ದರು. ಅವರು ನನ್ನನ್ನು ತಾಯಿಯಂತೆ ಪ್ರೀತಿಸುತ್ತಿದ್ದರು. ನನ್ನ ತಾಯಿ ಎರಡು ವರ್ಷಗಳ ಹಿಂದೆ ನಿಧನರಾದರು. ಆಗಲೂ ಶಾಂತಿ ಅಮ್ಮಾ ನನ್ನನ್ನು ಒಂಟಿಯಾಗಿ ಇರಲು ಬಿಡಲಿಲ್ಲ.ಊಟ, ತಿಂಡಿಯಿಂದ ಹಿಡಿದು ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಿದ್ದರು.
ಅಮ್ಮ ಸ್ನಾನಕ್ಕೆ ಬಿಸಿನೀರು ಹದ ಮಾಡುವುದರಿಂದ ಹಿಡಿದು, ಬಟ್ಟೆ ಒಗೆಯುವುದು, ನನ್ನ ಆಹಾರವನ್ನು ನೋಡಿಕೊಳ್ಳುವುದೂ ಪ್ರತಿಯೊಂದನ್ನೂ ಅವರು ಮಾಡುತ್ತಿದ್ದರು. ಅವರಿಂದಾಗಿ ಮಾಂಸಾಹಾರವನ್ನು ತಿನ್ನುವುದನ್ನು ಬಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.
ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈಗ ಅವರು ನಿಧನರಾದಾಗ, ನಾನು ಹಿಂದೂ ಧರ್ಮದ ಪದ್ಧತಿಯಂತೆಯೇ ಅವರ ಅಂತ್ಯಕ್ರಿಯೆ ನೆರವೇರಿಸಿದ್ದೇನೆ ಎಂದು ಅಲಿ ತಿಳಿಸಿದ್ದಾರೆ. ಶಾಂತಿ ದೇವಿಯ ಚಿತಾಭಸ್ಮವನ್ನು ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಅಥವಾ ಚಿತ್ತೋರ್‌ಗಢದಲ್ಲಿ ಅವರ ಇಚ್ಛೆಯಂತೆ ವಿಸರ್ಜಿಸಲಾಗುವುದು. ನಾನೇ ಅವರ ಚಿತಾಭಸ್ಮವನ್ನು ವಿಸರ್ಜಿಸುತ್ತೇನೆ ಎಂದಿದ್ದಾರೆ.