
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಸ್ವಾಮಿ ಚೈತನ್ಯಾನಂದಗೆ ಸಹಕರಿಸುವಂತೆ ವಿದ್ಯಾರ್ಥಿನಿಯರಿಗೆ ಒತ್ತಡ ಹಾಕುತ್ತಿದ್ದ ಮೂವರು ಸಹಾಯಕಿಯರು ಬಂಧನ
ನವದೆಹಲಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಸ್ವಾಮಿ ಚೈತನ್ಯಾನಂದ ಸರಸ್ವತಿಯ ಮೂವರು ಆಪ್ತ ಸಹಾಯಕಿಯರನ್ನು ದೆಹಲಿಯ ವಸಂತ್ ಕುಂಜ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮೂವರು ಮಹಿಳಾ ಸಹಾಯಕಿಯರನ್ನು ಶ್ವೇತಾ ಶರ್ಮಾ (ಅಸೋಸಿಯೇಟ್ ಡೀನ್), ಭಾವನಾ ಕಪಿಲ್ (ಕಾರ್ಯನಿರ್ವಾಹಕ ನಿರ್ದೇಶಕಿ) ಹಾಗೂ ಕಾಜಲ್ (ಹಿರಿಯ ಅಧ್ಯಾಪಕಿ) ಎಂದು ಗುರುತಿಸಲಾಗಿದೆ. ಈ ಮೂವರು ಸ್ವಾಮೀಜಿ ನಿರ್ದೇಶನದ ಮೇಲೆ ವಿದ್ಯಾರ್ಥಿನಿಯರ ಮೇಲೆ ಒತ್ತಡ ಹಾಕುತ್ತಿದ್ದರು. ಶಿಸ್ತು ಮತ್ತು ಸಮಯಪಾಲನೆ ನೆಪದಲ್ಲಿ ಒತ್ತಡ ಹೇರುವ ಪ್ರಯತ್ನ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಅಪರಾಧ ಕೃತ್ಯಕ್ಕೆ ಪ್ರಚೋದನೆ, ದೂರುದಾರರಿಗೆ ಬೆದರಿಕೆ, ಸಾಕ್ಷ್ಯಗಳನ್ನು ನಾಶಪಡಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರ ನಡುವೆ ವಿದ್ಯಾರ್ಥಿನಿಯರೊಂದಿಗೆ ಸ್ವಾಮೀಜಿ ತಂಗಿದ್ದರು ಎನ್ನಲಾದ ಉತ್ತರಾಖಂಡದ ಅಲ್ಮೋರಾದಲ್ಲಿರುವ ಅತಿಥಿ ಗೃಹಕ್ಕೆ ಪೊಲೀಸರ ತಂಡ ಭೇಟಿ ನೀಡಿ ಪರಿಶಿಲನೆ ನಡೆಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.