ಮಂಗಳೂರು; ಯುವತಿಯರು ಬಟ್ಟೆ ಬದಲಾಯಿಸುವ ದೃಶ್ಯ ವಿಡಿಯೋ ಮಾಡಿ ವೈರಲ್: ಯುವತಿಯ ಬಂಧನ

ಮಂಗಳೂರು; ಯುವತಿಯರು ಬಟ್ಟೆ ಬದಲಾಯಿಸುವ ದೃಶ್ಯ ವಿಡಿಯೋ ಮಾಡಿ ವೈರಲ್: ಯುವತಿಯ ಬಂಧನ

ಮಂಗಳೂರು: ಇಬ್ಬರು ಯುವತಿಯರ ಬಟ್ಟೆ ಬದಲಾಯಿಸುವುದನ್ನು ರಹಸ್ಯವಾಗಿ ಚಿತ್ರೀಕರಿಸಿ ವಿಡಿಯೋ ವೈರಲ್ ಮಾಡಿದ ಆರೋಪದ ಮೇಲೆ ಯುವತಿಯೊಬ್ಬಳನ್ನು  ಮಂಗಳೂರಿನ ಕದ್ರಿ ಪೊಲೀಸರು ಬಂಧಿಸಿದ್ದಾರೆ. 

ಚಿಕ್ಕಮಗಳೂರು ಜಿಲ್ಲೆಯ ಕಳಸದ ನಿರೀಕ್ಷಾ ಬಂಧನವಾಗಿರುವ ಯುವತಿ. ನಿರೀಕ್ಷಾ ಹಾಗೂ ಇನ್ನಿಬ್ಬರು ಯುವತಿಯರು ಸೇರಿಕೊಂಡು ಕುದ್ಕೋರಿಗುಡ್ಡೆಯ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಆದ್ರೆ, ನಿರೀಕ್ಷಾ ತನ್ನ ರೂಮ್​​ ಮೇಟ್ ಯುವತಿಯರು ಬಟ್ಟೆ ಬದಲಿಸುವುದನ್ನು ವಿಡಿಯೋ ಮಾಡಿಕೊಂಡು ವೈರಲ್ ಮಾಡಿದ್ದಾಳೆ. ಈ ಸಂಬಂಧ ಇದೀಗ ನಿರೀಕ್ಷಾಳನ್ನು ಪೊಲೀಸರು ಬಂಧಿಸಿದ್ದಾರೆ. 

ಇನ್ನೊಂದೆಡೆ ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಕಾರ್ಕಳದ ಅಭಿಷೇಕ್ ತನ್ನ ಡೆತ್ ನೋಟ್‌ನಲ್ಲಿ ಇದೇ ನಿರೀಕ್ಷಾಳ ಹೆಸರು ಉಲ್ಲೇಖ ಮಾಡಿದ್ದ. ಹೀಗಾಗಿ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ.

ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯರು ಕುದ್ಕೋರಿಗುಡ್ಡೆಯ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಯುವತಿಯರ ಬಟ್ಟೆ ಬದಲಾಯಿಸುವ ದೃಶ್ಯವನ್ನು ನಿರೀಕ್ಷಾ ರಹಸ್ಯವಾಗಿ ವಿಡಿಯೋ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಈ ವಿಡಿಯೋವನ್ನು ಉಡುಪಿ ಜಿಲ್ಲೆಯ ಕಾರ್ಕಳದ ಮೃತ ಅಭಿಷೇಕ್‌ಗೆ ಕಳುಹಿಸಿದ್ದಾಳೆ ಎಂದು ತಿಳಿದುಬಂದಿದೆ. ಅಭಿಷೇಕ್, ಮಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿದ್ದವನು, ಕಳೆದ ಅಕ್ಟೋಬರ್ 09 ರಂದು ಕಾರ್ಕಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.

ಅಭಿಷೇಕ್ ಆತ್ಮಹತ್ಯೆಗೂ ಮುನ್ನ ಸುದೀರ್ಘ  ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ನಿರೀಕ್ಷಾ ಸೇರಿದಂತೆ ಕೆಲವರ ಹೆಸರು ಉಲ್ಲೇಖಿಸಿ ಹನಿಟ್ರ್ಯಾಪ್ ಆರೋಪ ಮಾಡಿದ್ದಾನೆ. ಜೊತೆಗೆ ನಿರೀಕ್ಷಾ ತನ್ನ ರೂಂಮೇಟ್‌ಗಳಾದ ಇಬ್ಬರು ಯುವತಿಯರ ವಿಡಿಯೋ ಚಿತ್ರೀಕರಿಸಿ ವೈರಲ್ ಮಾಡಿದ್ದಾಳೆ ಎಂದು ಉಲ್ಲೇಖಿಸಿದ್ದ ಎನ್ನಲಾಗಿದೆ. 

ಆರೋಪಿ ವಿರುದ್ಧ ಬಿಎನ್‌ಎಸ್ 77, 78(2), 294(2)(a) ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಕಳೆದ ಒಂದು ವರ್ಷದ ಹಿಂದೆ ಚಿತ್ರೀಕರಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ಸಂಬಂಧ ಉಡುಪಿ ಜಿಲ್ಲೆಯ ಕಾರ್ಕಳ ಪೊಲೀಸರು ಅಭಿಷೇಕ್‌ನ ಆತ್ಮಹತ್ಯೆಗೆ ಸಂಬಂಧಿಸಿದ ತನಿಖೆಯನ್ನು ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article