ಸಿಜೆಐ ಗವಾಯಿಯವರ ಮೇಲೆ ಶೂ ಎಸೆದ ವಕೀಲನನ್ನು ಶ್ಲಾಘಿಸಿದ ಬಿಜೆಪಿ ಮುಖಂಡ ಭಾಸ್ಕರ ರಾವ್!
ಬೆಂಗಳೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರತ್ತ ಶೂ ಎಸೆದ ಘಟನೆಯು ದೇಶಾದ್ಯಾಂತ ಖಂಡನೆಗೆ ಗುರಿಯಾಗಿರುವಾಗ, ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಹಾಗೂ ಬಿಜೆಪಿ ಮುಖಂಡ ಭಾಸ್ಕರ ರಾವ್ ಅವರ ಪ್ರತಿಕ್ರಿಯೆ ಹೊಸ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.
ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ, ಈ ಕೃತ್ಯ ಎಸಗಿದ ವಕೀಲನ ಧೈರ್ಯವನ್ನು ಶ್ಲಾಘಿಸಿರುವುದರಿಂದ ವಿವಿಧ ವಲಯಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿವೆ.
“ಕಾನೂನಾತ್ಮಕವಾಗಿ ಮತ್ತು ಭಯಾನಕ ಪ್ರಮಾದವಾಗಿದ್ದರೂ, ಆತನ ಸಾಹಸವನ್ನು ಮೆಚ್ಚಬೇಕು” ಎಂದು ಭಾಸ್ಕರ ರಾವ್ ತಮ್ಮ ಪೋಸ್ಟ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಈ ಹೇಳಿಕೆಯು ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಕಾನೂನು ವಲಯ ಹಾಗೂ ರಾಜಕೀಯ ವಲಯದಿಂದ ಖಂಡನೆಗಳು ವ್ಯಕ್ತವಾಗಿವೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಮುಖಂಡ ಮನ್ಸೂರ್ ಖಾನ್ ಅವರು, ಭಾಸ್ಕರ ರಾವ್ ಅವರ ನಿಲುವನ್ನು ಪ್ರಶ್ನಿಸಿ, “ಮಾಜಿ ಐಪಿಎಸ್ ಅಧಿಕಾರಿ ಆಗಿರುವ ನೀವು, ಕಾನೂನನ್ನು ಎತ್ತಿಹಿಡಿಯಬೇಕಾದ ವ್ಯಕ್ತಿ. ಆದರೆ ಸಿಜೆಐಗೆ ಅವಮಾನ ಮಾಡಿದ ವಕೀಲನ ಧೈರ್ಯವನ್ನು ಶ್ಲಾಘಿಸುವುದು ನಾಚಿಕೆಗೇಡಿನ ಸಂಗತಿ” ಎಂದು ಹೇಳಿದ್ದಾರೆ.
ಇದು ಕಾನೂನಾತ್ಮಕವಾಗಿ ಮತ್ತು ಭಯಾನಕ ಪ್ರಮಾದವಾಗಿದ್ದರೂ, ಆತನ ಸಾಹಸವನ್ನು ನೀವು ಶ್ಲಾಘಿಸುತ್ತೀರಾ? ಮಾಜಿ ಐಪಿಎಸ್ ಅಧಿಕಾರಿ ಹಿನ್ನೆಲೆಯಿಂದ ಬಂದ ನಿಮಗೆ ಇದು ನಾಚಿಕೆಗೇಡು. ಒಮ್ಮೆ ಕಾನೂನು ಎತ್ತಿಹಿಡಿದಿದ್ದ ನೀವು, ಸಿಜೆಐಯನ್ನು ಅವಮಾನಿಸಿದ ವ್ಯಕ್ತಿಯನ್ನು ಸಮರ್ಥಿಸುತ್ತಿದ್ದೀರಿ.., ಎಂಥ ಪತನ! ಎಂದು ಕಾಂಗ್ರೆಸ್ ಮುಖಂಡ ಮನ್ಸೂರ್ ಖಾನ್ ಅವರು ಎಕ್ಸ್‌ನಲ್ಲಿ ಭಾಸ್ಕರ ರಾವ್ ವಿರುದ್ಧ ಚಾಟಿ ಬೀಸಿದ್ದಾರೆ.
ವಿವಾದ ಹೆಚ್ಚಾದಂತೆ, ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಬಳಕೆದಾರರು ಭಾಸ್ಕರ ರಾವ್ ಅವರ ನಿಲುವನ್ನು ಟೀಕಿಸಿ, “ಧೈರ್ಯವನ್ನು ಶ್ಲಾಘಿಸುವುದಕ್ಕಿಂತ ಕೃತ್ಯವನ್ನು ಖಂಡಿಸುವುದು ನಿಮ್ಮ ಕರ್ತವ್ಯ” ಎಂದು ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಾಂಗದ ಗೌರವ ಮತ್ತು ಕಾನೂನು ಪ್ರಕ್ರಿಯೆಯ ಮೇಲಿನ ಜನರ ವಿಶ್ವಾಸವನ್ನು ಉಳಿಸಲು ಇಂತಹ ಘಟನೆಗಳನ್ನು ತೀವ್ರವಾಗಿ ಖಂಡಿಸಬೇಕೆಂದು ಹಿರಿಯ ವಕೀಲರು ಹಾಗೂ ನಾಗರಿಕರು ಆಗ್ರಹಿಸುತ್ತಿದ್ದಾರೆ.
ಅಕ್ಟೋಬರ್ 6 ರಂದು ಸುಪ್ರೀಂ ಕೋರ್ಟ್‌ನಲ್ಲಿ ವಕೀಲ ರಾಕೇಶ್ ಕಿಶೋರ್ ಅವರು ನ್ಯಾಯಮೂರ್ತಿ ಗವಾಯಿ ಅವರತ್ತ ಶೂ ಎಸೆಯಲು ಪ್ರಯತ್ನಿಸಿ “ಸನಾತನ ಧರ್ಮದ ಅಪಮಾನವನ್ನು ಸಹಿಸುವುದಿಲ್ಲ” ಎಂದು ಘೋಷಣೆ ಕೂಗಿದ್ದ.