ಕೊಪ್ಪಳ; ಹುಲಿಗೆಮ್ಮ ದೇವಸ್ಥಾನಕ್ಕೆ ಪಾದಯಾತ್ರೆಗೆ ತೆರಳುತ್ತಿದ್ದ ಭಕ್ತರಿಗೆ ಬಸ್ ಡಿಕ್ಕಿ: ಮೂವರು ಸಾವು, ನಾಲ್ವರಿಗೆ ಗಾಯ

ಕೊಪ್ಪಳ; ಹುಲಿಗೆಮ್ಮ ದೇವಸ್ಥಾನಕ್ಕೆ ಪಾದಯಾತ್ರೆಗೆ ತೆರಳುತ್ತಿದ್ದ ಭಕ್ತರಿಗೆ ಬಸ್ ಡಿಕ್ಕಿ: ಮೂವರು ಸಾವು, ನಾಲ್ವರಿಗೆ ಗಾಯ

ಕೊಪ್ಪಳ: ಕೊಪ್ಪಳ‌ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನಕ್ಕೆ ಪಾದಯಾತ್ರೆಗೆ ತೆರಳುತ್ತಿದ್ದ ಭಕ್ತರ ಮೇಲೆ ಖಾಸಗಿ ಸ್ಲೀಪರ್ ಕೋಚ್ ಬಸ್ ಹರಿದು ಮೂವರು ಮೃತಪಟ್ಟ ಹೃದಯವಿದ್ರಾವಕ ಘಟನೆ ಕೊಪ್ಪಳ ಜಿಲ್ಲೆಯ ಕೂಕನಪಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ನಡೆದಿದೆ.

ಅಪಘಾತದಲ್ಲಿ ಅನ್ನಪೂರ್ಣ (40ವ), ಪ್ರಕಾಶ್ (25ವ), ಶರಣಪ್ಪ (19ವ) ಎಂಬ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೃತರು ಗದಗ ಜಿಲ್ಲೆಯ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದವರಾಗಿದ್ದಾರೆ. ಹುಲಿಗೆಮ್ಮ ದೇವಾಲಯದ ಪಾದಯಾತ್ರೆಗೆ ತೆರಳುತ್ತಿದ್ದರು. ಘಟನೆಯಲ್ಲಿ ನಾಲ್ವರು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸಿಂದಗಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ ನಿಯಂತ್ರಣ ತಪ್ಪಿ ಭಕ್ತರ ಮೇಲೆ ಹರಿದ ಪರಿಣಾಮ ಈ ದುರಂತ ಸಂಭವಿಸಿದೆ. ಅಪಘಾತದ ವೇಳೆ ಭಕ್ತರು ದೇವಾಲಯದಿಂದ ಕೇವಲ ಮೂರು ಗಂಟೆಗಳ ನಡಿಗೆಯ ದೂರದಲ್ಲಿದ್ದರು.

ವಿಷಯ ತಿಳಿಯುತ್ತಿದ್ದಂತೆ ಮುನಿರಾಬಾದ್ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಖಾಸಗಿ ಬಸ್ ಚಾಲಕನನ್ನ ಪೊಲೀಸರು ಬಂಧಿಸಿದ್ದಾರೆ.

ಪಾದಯಾತ್ರೆಗೆ ತೆರಳಿದ್ದ 7 ಮಂದಿ

ರೋಣ ತಾಲೂಕಿನ ತಳ್ಳಿಹಾಳದಿಂದ ಒಟ್ಟು ಏಳು ಜನ ಪಾದಯಾತ್ರೆಗೆ ತೆರಳತಿದ್ರು. ಏಳು ಜನರಲ್ಲಿ ಮೂವರು ಸಾವನ್ನಪ್ಪಿದ್ದು, ನಾಲ್ಕು ಜನರಿಗೆ ಗಂಭೀರ ಗಾಯ‌ಗಳಾಗಿವೆ ಎಂದು ತಿಳಿದು ಬಂದಿದೆ. ಗಾಯಾಳುಗಳಿಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಘಟನಾ ಸ್ಥಳಕ್ಕೆ ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ರಾಮ್ ಅರಸಿದ್ದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

Ads on article

Advertise in articles 1

advertising articles 2

Advertise under the article