ರಾಜ್ಯದ ಜನತೆಯ ಶೇ.87ರಷ್ಟು ಹಣದಲ್ಲಿ ಮೆಟ್ರೊ ಆಗಿದೆ; ಬಿಜೆಪಿಯವರು ಮೆಟ್ರೊ ಕೇಂದ್ರದ ಯೋಜನೆ ಎಂದು ತಿರುಚಿ ಸುಳ್ಳು ಹೇಳುತ್ತಿದ್ದಾರೆ: CM ಸಿದ್ದರಾಮಯ್ಯ

ರಾಜ್ಯದ ಜನತೆಯ ಶೇ.87ರಷ್ಟು ಹಣದಲ್ಲಿ ಮೆಟ್ರೊ ಆಗಿದೆ; ಬಿಜೆಪಿಯವರು ಮೆಟ್ರೊ ಕೇಂದ್ರದ ಯೋಜನೆ ಎಂದು ತಿರುಚಿ ಸುಳ್ಳು ಹೇಳುತ್ತಿದ್ದಾರೆ: CM ಸಿದ್ದರಾಮಯ್ಯ

ಬೆಂಗಳೂರು: ಬೆಂಗಳೂರಿನ ಮೆಟ್ರೊಗೆ ಶೇ 87ರಷ್ಟು ಹಣ ಕೊಡುವುದು ನಾವೇ. ಅಂದರೆ ರಾಜ್ಯದ ಜನತೆಯ ಶೇ 87ರಷ್ಟು ಹಣದಲ್ಲಿ ಮೆಟ್ರೊ ಆಗಿದೆ. ಆದರೆ ಬಿಜೆಪಿಯವರು ಮೆಟ್ರೊ ಕೇಂದ್ರದ ಯೋಜನೆ ಎಂದು ತಿರುಚಿ ಸುಳ್ಳು ಹೇಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಗಾಂಧಿ ನಗರ ಕ್ಷೇತ್ರದ ಚಿಕ್ಕಪೇಟೆಯಲ್ಲಿ ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಸಮಾರಂಭದಲ್ಲಿ ಮಾತನಾಡಿದ ಅವರು, ದಿನೇಶ್ ಗುಂಡೂರಾವ್ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಶ್ರಮಿಸುವ ಜನಮುಖಿ ಶಾಸಕರು. ಇವರಿಗೆ ಉತ್ತಮ ಅವಕಾಶಗಳಿವೆ. ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಬಹುಮತದಿಂದ ಗೆಲ್ಲಿಸಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕೆಂಪೇಗೌಡರ ಕಾಲದಲ್ಲಿ ಪೇಟೆ ಬೀದಿಯಾಗಿದ್ದ ಇಲ್ಲಿನ‌ ಪೇಟೆಗಳು ಈಗಲೂ ಆ ಕಾಲದ ಸ್ವಭಾವವನ್ನೇ ಹೊಂದಿವೆ. ನಾವೊಮ್ಮೆ ಇಲ್ಲಿನ ರಸ್ತೆಗಳ ಅಗಲೀಕರಣದ ಬಗ್ಗೆ ಚಿಂತಿಸಿದ್ದೆವು. ಆದರೆ, ದಿನೇಶ್ ಗುಂಡೂರಾವ್ ಅವರು ಒಪ್ಪಲಿಲ್ಲ. ನಮ್ಮ ಜನಗಳಿಗೆ ಸಮಸ್ಯೆ ಆಗಲಿದೆ ಎಂದು ಸ್ಪಷ್ಟವಾಗಿ ನಿರಾಕರಿಸಿ, ರಸ್ತೆ ಅಗಲೀಕರಣ ಮಾಡದೆ, ರಸ್ತೆಗಳ ಆಧುನೀಕರಣ ಮತ್ತು ಚಿಕ್ಕಪೇಟೆಯ ಅಭಿವೃದ್ಧಿಗೆ ಯೋಜನೆ ರೂಪಿಸಿ ಜಾರಿ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಬೆಂಗಳೂರು ವಿಪರೀತವಾಗಿ ಬೆಳೆಯುತ್ತಿರುವ ನಗರ. ಈ ನಗರದ ಜನಸಂಖ್ಯೆ ಹೆಚ್ಚುತ್ತಿದ್ದು ಈ ಸವಾಲಿನ ಜೊತೆಗೇ ಬೆಂಗಳೂರಿನ‌ ರಸ್ತಡಗಳ ಆಧುನೀಕರಣ ಮತ್ತು ಅಭಿವೃದ್ಧಿಗೆ ಹೇರಳವಾದ ಹಣ ಒದಗಿಸುತ್ತಿದ್ದೇವೆ ಎಂದರು. ಜಿಎಸ್‌ಟಿ ಜಾರಿ ಮಾಡಿ 8 ವರ್ಷ ಇಡೀ ಭಾರತೀಯರ ಹಣ ಸುಲಿದಿದ್ದು ಇದೇ ಕೇಂದ್ರ ಸರ್ಕಾರ ಮತ್ತು ಇದೇ ನರೇಂದ್ರ ಮೋದಿ. ಎಂಟು ವರ್ಷ ಸುಲಿಗೆ ಮಾಡಿ ಈಗ ಮೋದಿ ಫೋಟೋ ಹಾಕಿ ‘ದೀಪಾವಳಿ ಗಿಫ್ಟ್’ ಎಂದು ನಾಚಿಕೆ ಇಲ್ಲದೆ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಇಂಥಾ ನಕಲಿಗಳಿಗೆ ನೀವು ಓಟು ಹಾಕಿ ಈಗ ಏಕೆ ತಲೆ ಮೇಲೆ ಕೈ ಹೊತ್ತುಕೊಳ್ತೀರಿ ಎಂದು ಸಾರ್ವಜನಿಕರಿಗೆ ಪ್ರಶ್ನಿಸಿದರು.

ಸಂಸದರು ಕೇಂದ್ರದ ಬಳಿ ಕರ್ನಾಟಕಕ್ಕೆ ಕೊಡಬೇಕಾದ ದುಡ್ಡು ಕೇಳಲ್ಲ, ದಕ್ಷಿಣದಲ್ಲಿ ಇದಾನಲ್ಲ ಅಮವಾಸ್ಯೆ ತೇಜಸ್ವಿ ಸೂರ್ಯ ಕೂಡ ಕೇಂದ್ರದ ಬಳಿ ಹಣ ಕೇಳಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಸಂಸದರು ಕರ್ನಾಟಕಕ್ಕೆ ಕೊಡಬೇಕಾದ ದುಡ್ಡು ಕೇಳಲ್ಲ, ಪಿಸಿ ಮೋಹನ್ ಕೇಳಲಿಲ್ಲ, ಅವನು ಯಾರು ಸೌತ್ ಅಲ್ಲಿ ಇದಾನಲ್ಲ ಅಮಾವಾಸ್ಯೆ ತೇಜಸ್ವಿ ಸೂರ್ಯ ಕೇಂದ್ರದ ಬಳಿ ಹಣ ಕೇಳಲಿಲ್ಲ, ಆಯಮ್ಮ ಶೋಭಾ ಕರಂದ್ಲಾಜೆ ಕೂಡ ಹಣ ತರಲ್ಲ. ಮಂತ್ರಿ ಆಗಿರುವ ಕುಮಾರಸ್ವಾಮಿ ಕೂಡ ಕೇಂದ್ರದ ಬಳಿ ಹಣ ಕೇಳಿಲ್ಲ. ಅದಕ್ಕೆ ಕುಮಾರಸ್ವಾಮಿ ಸೇರಿ ಎಲ್ಲ ಎಂಪಿಗಳನ್ನು ಸೋಲಿಸಿ ಎಂದು ಕರೆ ನೀಡಿದರು.

‘ದೀಪಾವಳಿ ಗಿಫ್ಟ್’ ಎಂದು ಜಾಹೀರಾತು ನೀಡಿರುವ ಮೋದಿ ಸರ್ಕಾರವು ಜಿಎಸ್‌ಟಿ ಬದಲಾವಣೆಯಿಂದ ರಾಜ್ಯಕ್ಕೆ, ರಾಜ್ಯದ ಜನರಿಗೆ ₹15 ಸಾವಿರ ಕೋಟಿ ನಷ್ಟವಾಗಿದೆ ಎಂದು ಲೆಕ್ಕ ಬಿಚ್ಚಿಟ್ಟರು. ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದೇ ಒಂದು ಹೊಸ ರಸ್ತೆ ನಿರ್ಮಿಸಲಿಲ್ಲ. ಒಂದೇ ಒಂದು ರಸ್ತೆ ಗುಂಡಿ ಮುಚ್ಚಲಿಲ್ಲ. ಈಗ ಇರುವ ರಸ್ತೆಗಳೆಲ್ಲಾ ಕಾಂಗ್ರೆಸ್ ಸರ್ಕಾರದ ಕಾಲದಲ್ಲೇ ಆಗಿರುವಂಥವು ಎಂದರು. ಒಂದು ವಾರದಲ್ಲಿ ರಸ್ತೆ ಗುಂಡಿಗಳನ್ನೆಲ್ಲಾ ಮುಚ್ಚಿ ಒಂದು ಲೇಯರ್ ಟಾರ್ ಹಾಕಬೇಕು ಎಂದು ಗ್ರೇಟರ್ ಬೆಂಗಳೂರು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರಿಗೆ ವೇದಿಕೆಯಿಂದಲೇ ಸೂಚನೆ ನೀಡಿದರು.

ಇನ್ನೂ ಇದೇ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿ ಸುಮಾರು 500 ಕಿ.ಮಿ. ರಸ್ತೆಯನ್ನು 4 ಸಾವಿರ ಕೋಟಿ ವೆಚ್ಚದಲ್ಲಿ ವೈಟ್ ಟ್ಯಾಪಿಂಗ್ ಮಾಡಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ದಪಡಿಸುತ್ತಿದ್ದು, ಮುಂದಿನ ವಾರ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.

ಈಗಾಗಲೇ ₹1800 ಕೋಟಿ ವೆಚ್ಚದಲ್ಲಿ 82 ರಸ್ತೆ ವೈಟ್ ಟ್ಯಾಪಿಂಗ್ ಗೆ ಯೋಜನೆ ಜಾರಿಯಲ್ಲಿದೆ. ಇದರಲ್ಲಿ 104 ಕಿ.ಮಿ. ಹೊಸ ರಸ್ತೆಯೂ ಸೇರಿದೆ. ಇದಲ್ಲದೇ ₹695 ಕೋಟಿ ವೆಚ್ಚದಲ್ಲಿ 350 ಕಿ.ಮಿ. ರಸ್ತೆ ಗುಂಡಿ ಮುಚ್ಚಲಾಗಿದೆ ಎಂದರು. ಈಗಾಗಲೇ 10 ಸಾವಿರದಷ್ಟು ರಸ್ತೆ ಗುಂಡಿಗಳನ್ನು ಬೆಂಗಳೂರು ನಗರದಲ್ಲಿ ಮುಚ್ಚಿದ್ದೇವೆ.

ಬಿಜೆಪಿ ಸರ್ಕಾರ ಇದ್ದಾಗ 20 ಸಾವಿರ ಗುಂಡಿ ಇದ್ದುದನ್ನು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದರು. ನಾವು ಪ್ರಾಮಾಣಿಕವಾಗಿಯೇ ಬೆಂಗಳೂರು ಅಭಿವೃದ್ದಿಗೆ ಒತ್ತು ನೀಡುತ್ತಿದ್ದೇವೆ ಎಂದರು. ಬೆಂಗಳೂರು ಅಭಿವೃದ್ದಿಗೆ ಮೋದಿ ಅವರು ಒಂದು ಪೈಸೆ ನೀಡಿಲ್ಲ. ಸಂಸದರೂ ಬೆಂಗಳೂರು ಪ್ರಗತಿ, ತೆರಿಗೆ ಹಂಚಿಕೆ ಅನ್ಯಾಯದ ಬಗ್ಗೆ ಕೇಳುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

Ads on article

Advertise in articles 1

advertising articles 2

Advertise under the article