ಕೈಬರಹದ ಮೂಲಕ ಪವಿತ್ರ ಕುರ್‌ಆನ್ ಬರೆದ ಫಾತಿಮತ್ ಅಬೀರಾ; 'ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್'ನಿಂದ ಸನ್ಮಾನ
ಫಾತಿಮತ್ ಅಬೀರಾರ ಶ್ರಮ, ತ್ಯಾಗ ಮತ್ತು ಕುರ್‌ಆನ್ ಬಗೆಗಿನ ಒಲವು ಶ್ಲಾಘನೀಯ: ರಫೀಕ್ ಮಾಸ್ಟರ್
ಪುತ್ತೂರು: ಪವಿತ್ರ ಕುರ್‌ಆನ್ ನ್ನು ಕೈಬರಹದ ಮೂಲಕವೇ ಬರೆದು ದಾಖಲೆ ನಿರ್ಮಿಸಿರುವ ಕೆಮ್ಮಾರ ಶಂಸುಲ್ ಉಲಮಾ ಶರೀಅತ್ ಕಾಲೇಜಿನ ವಿದ್ಯಾರ್ಥಿನಿ, ಉಪ್ಪಿನಂಗಡಿ ಹಳೆಗೇಟು ಬಳಿಯ ಹೈದರ್ ಅಲಿ ಮತ್ತು ಉಮೈಬಾ ದಂಪತಿಗಳ ಪುತ್ರಿ ಫಾತಿಮತ್ ಅಬೀರರನ್ನು 'ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್' ವತಿಯಿಂದ ಶನಿವಾರ ಸನ್ಮಾನಿಸಿ ಗೌರವಿಸಲಾಯಿತು.
ಉಪ್ಪಿನಂಗಡಿ ಹಳೆಗೇಟು ಬಳಿಯ ಹೈದರ್ ಅಲಿ ಮನೆಯಲ್ಲಿಯೇ ಈ ಸರಳ ಸನ್ಮಾನ ಕಾರ್ಯಕ್ರಮ ನಡೆಯಿತು. ಶರ್ಪುನ್ನಿಸಾ ಕಂಕನಾಡಿ ಹಾಗು ಆತಿಕಾ ರಫೀಕ್ ಮಾಸ್ಟರ್ ಅವರ ನೇತೃತ್ವದಲ್ಲಿ ಫಾತಿಮತ್ ಅಬೀರ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ, ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್‌ನ ಪ್ರತಿನಿಧಿ, ಖ್ಯಾತ ತರಬೇತುದಾರ ರಫೀಕ್ ಮಾಸ್ಟರ್ ಮಾತನಾಡಿ, ಫಾತಿಮತ್ ಅಬೀರಾ ಅವರು ಮಾಡಿರುವ ಅತ್ಯುತ್ತಮ ಸಾಧನೆಯನ್ನು ಗುರುತಿಸಿ ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ಸನ್ಮಾನಿಸಿದ್ದು, ಅವರ ಶ್ರಮ, ತ್ಯಾಗ ಮತ್ತು ಕುರ್‌ಆನ್ ಬಗೆಗಿನ ಒಲವು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಹ್ಮದ್ ಸಯೀದ್ ಕಂಕನಾಡಿ, ಅಬ್ದುಲ್ ರಹಿಮಾನ್ ಯುನಿಕ್, ಫಾತಿಮತ್ ಅಬೀರಾ ಅವರ ತಂದೆ ಹೈದರ್ ಅಲಿ, ಅಬ್ದುಲ್ ಖಾದರ್(ಹುದವಿ ವಿದ್ಯಾರ್ಥಿ) ಉಪಸ್ಥಿತರಿದ್ದರು.
ಈ ಸಾಧನೆಯ ಹಿಂದೆ 2 ವರ್ಷ 7 ತಿಂಗಳ ಶ್ರಮವಿಸಿದೆ
ಈ ಕುರಾನ್ ಪ್ರತಿ 610 ಪುಟಗಳನ್ನು ಹೊಂದಿದ್ದು, 2.260 ಗ್ರಾಂ ತೂಕ, 13 ಇಂಚು ಉದ್ದ ಹಾಗೂ 9 ಇಂಚು ಅಗಲ ಹೊಂದಿದೆ. ಬರೆಯಲು ಕಪ್ಪು ಬಣ್ಣದ ಶಾಯಿ ಹಾಗೂ ಪಿಂಕ್ ಕಲರ್ ಪೆನ್ ಬಳಸಲಾಗಿದೆ. 2021 ಅಕ್ಟೋಬರ್ 25ರಂದು 9ನೇ ತರಗತಿಯಲ್ಲಿ ಕಡಬದ ಪ್ರೌಢ ಶಾಲೆಯಲ್ಲಿ ಕಲಿಯುತ್ತಿರುವಾಗ ಬರೆಯಲು ಆರ೦ಭಿಸಿದ್ದು, ಮುಂದೆ 10ನೇ ತರಗತಿ ಸಾರ್ವತ್ರಿಕ ಪರೀಕ್ಷೆ ಹಿನ್ನೆಲೆಯಲ್ಲಿ ಬರವಣಿಗೆ ಕೆಲಸವನ್ನು ಕೈಬಿಟ್ಟಿದ್ದರು. ನಂತರ ಕೆಮ್ಮಾರ ಶಂಸುಲ್ ಉಲಮಾ ಶರೀಅತ್ ಕಾಲೇಜಿಗೆ ಫಾಳಿಲಾ ಶರೀಅತ್ ಶಿಕ್ಷಣದ ಜತೆಗೆ ಪಿಯುಸಿ ಕಲಿಯಲು ಪ್ರವೇಶ ಪಡೆದು ಕಲಿಕೆಯ ಮಧ್ಯೆ ಬಿಡುವು ಮಾಡಿಕೊಂಡು ನಿರಂತರ ಎರಡು ವರ್ಷದಲ್ಲಿ ಕುರಾನ್ ಮೂವತ್ತು ಕಾಂಡವನ್ನು ಬರೆದು ಮುಗಿಸಿದ್ದಾರೆ.
ಪಿಯುಸಿ ಪರೀಕ್ಷೆಯಲ್ಲಿ ಅವರು 553 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರು. ಸಮಸ್ತ ಫಾಳಿಲಾ ಶರೀಅತ್ ಪಬ್ಲಿಕ್ ಪರೀಕ್ಷೆಯಲ್ಲಿ ಶೇ 95.5 ಅಂಕ ಪಡೆದು ಕೇಂದ್ರ ಬೋರ್ಡ್‌ನ ಟಾಪ್ 10ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದೀಗ ಮಿತ್ತಬೈಲ್ ದಾರುಲ್ ಉಲೂಂ ಕಾಲೇಜಿನಲ್ಲಿ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದಾರೆ.
ಕ್ಯಾಲಿಗ್ರಾಫ್‌ನಿಂದ ಪ್ರೇರಣೆ: ಫಾತಿಮತ್ ಅಬೀರ
ಕುಟುಂಬದ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಕ್ಯಾಲಿಗ್ರಾಫ್ ಸ್ಪರ್ಧೆ ನಡೆದಿತ್ತು. ಅದರಲ್ಲಿ ಅಲ್ಲಾಹುವಿನ ನಾಮಸ್ಮರಣೆಯ ಸೂಕ್ತಿಯನ್ನು ಮಾಡಿದ್ದೆ. ಅದನ್ನು ನೋಡಿದ ಕುಟುಂಬ ಸದಸ್ಯ ಲತೀಫ್ ಫೈಝಿ ಮೆಚ್ಚುಗೆ ವ್ಯಕ್ತಪಡಿಸಿ ಇದನ್ನು ಮುಂದುವರಿಸಲು ಸೂಚಿಸಿದರು. ಅದೇ ಪ್ರೇರಣೆಯಿಂದ ಕುರಾನ್ ಬರೆಯಲಾರಂಭಿಸಿದ್ದು, ಮನೆ ಯವರ, ಕುಟುಂಬಸ್ಥರ ಮತ್ತು ಶರೀಅತ್ ಕಾಲೇಜಿನ ಉಸ್ತಾದರ, ಶಿಕ್ಷಕಿಯರ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಫಾತಿಮತ್ ಅಬೀರ ತಿಳಿಸಿದ್ದಾರೆ.