
ಶಿಕ್ಷಣ, ಆರೋಗ್ಯ, ಸಮಾಜ ಸೇವೆಯಲ್ಲಿ ಅನುಪಮ ಕೊಡುಗೆ ನೀಡುತ್ತಿರುವ ಜಿ.ಶಂಕರ್ ನಿಜಾರ್ಥದಲ್ಲಿ ಸಮಾಜಸೇವಾ ಹರಿಕಾರ: ಡಾ.ಎಚ್.ಎಸ್.ಬಲ್ಲಾಳ್
ಜಿ.ಶಂಕರ್ ಕುರಿತ ‘ಸಮಾಜಸೇವಾ ಹರಿಕಾರ’ ಪುಸ್ತಕ ಬಿಡುಗಡೆ
ಉಡುಪಿ: ಸಮಾಜ ಸೇವಕ ನಾಡೋಜ ಡಾ.ಜಿ.ಶಂಕರ್ ಕುರಿತ ‘ಸಮಾಜ ಸೇವಾ ಹರಿಕಾರ’ ಪುಸ್ತಕವನ್ನು ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ರವಿವಾರ ಅಂಬಲಪಾಡಿ ಶಾಮಿಲಿ ಸಭಾಂಗಣದ ಮಿನಿ ಹಾಲ್‌ನಲ್ಲಿ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಡಾ.ಎಚ್.ಎಸ್.ಬಲ್ಲಾಳ್, ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆಯಲ್ಲಿ ಅನುಪಮ ಕೊಡುಗೆ ನೀಡುತ್ತಿರುವ ಜಿ.ಶಂಕರ್, ನಿಜಾರ್ಥದಲ್ಲಿ ಸಮಾಜಸೇವಾ ಹರಿಕಾರರಾಗಿದ್ದಾರೆ. ಪ್ರತಿಭಾವಂತ ಬಡ ಮಕ್ಕಳಿಗೆ ಶಿಕ್ಷಣಕ್ಕೆ ನೆರವು, ಸಾಮೂಹಿಕ ವಿವಾಹ, ರಕ್ತದಾನ ಶಿಬಿರ, ಯಕ್ಷಗಾನ ಕಲಾವಿದರಿಗೆ ನೆರವು ಹೀಗೆ ಅವರ ಬಹುಮುಖ ಸಮಾಜ ಸೇವೆ ಇತತರಿಗೆ ಮಾದರಿ. ಜಾತಿ, ಧರ್ಮ, ಲಿಂಗ ಭೇದವಿಲ್ಲದೇ ವಿವಿಧ ಕೊಡುಗೆಗಳನ್ನು ನೀಡುತ್ತಿರುವ ಡಾ.ಜಿ. ಶಂಕರ್ ಬೇರೆಯವರ ಏಳಿಗೆಗಾಗಿ ತನ್ನ ಬದುಕು ಎಂಬ ಭಾವದಿಂದ ಬಾಳುತ್ತಿರುವ ಆದರ್ಶ ವ್ಯಕ್ತಿ ಎಂದರು.
ಪುಸ್ತಕ ಲೇಖಕ ಉದಯಕುಮಾರ್ ಹಟ್ಟಿಯಂಗಡಿ ಹಾಗೂ ಸಾಹಿತಿ ಸಂಶೋಧಕಿ ಡಾ.ಗಾಯತ್ರಿ ನಾವಡ ಕೃತಿ ಪರಿಚಯ ಮಾಡಿದರು. ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವಿಶ್ವಸ್ಥೆ ಶ್ಯಾಮಿಲಿ ನವೀನ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಸಂಶೋಧಕ ಸಾಹಿತಿ ಪ್ರೊ.ಎ.ವಿ.ನಾವಡ, ಜಾನಪದ ಸಂಶೋಧಕ ಬನ್ನಂಜೆ ಬಾಬು ಅಮೀನ್ ಉಪಸ್ಥಿತರಿದ್ದರು.
ಟ್ರಸ್ಟ್ ವಿಶ್ವಸ್ಥರಾದ ಆನಂದ ಎಸ್.ಕೆ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಂಕರ ಸಾಲ್ಯಾನ್ ವಂದಿಸಿದರು.