ಮಹಾರಾಷ್ಟ್ರದ ಐತಿಹಾಸಿಕ ಪ್ರವಾಸಿ ಸ್ಥಳದಲ್ಲಿ ನಮಾಝ್; ಗೋಮೂತ್ರದಿಂದ 'ಶುದ್ಧೀಕರಿಸಿದ' ಬಿಜೆಪಿ ಸಂಸದೆ ಮೇಧಾ ಕುಲಕರ್ಣಿ: ವಿಪಕ್ಷದಿಂದ ರಾಜೀನಾಮೆಗೆ ಒತ್ತಾಯ

ಮಹಾರಾಷ್ಟ್ರದ ಐತಿಹಾಸಿಕ ಪ್ರವಾಸಿ ಸ್ಥಳದಲ್ಲಿ ನಮಾಝ್; ಗೋಮೂತ್ರದಿಂದ 'ಶುದ್ಧೀಕರಿಸಿದ' ಬಿಜೆಪಿ ಸಂಸದೆ ಮೇಧಾ ಕುಲಕರ್ಣಿ: ವಿಪಕ್ಷದಿಂದ ರಾಜೀನಾಮೆಗೆ ಒತ್ತಾಯ

ಪುಣೆ: ಮಹಾರಾಷ್ಟ್ರದ ಐತಿಹಾಸಿಕ ಪ್ರವಾಸಿ ಸ್ಥಳವಾದ ಶನಿವಾರ್ ವಾಡದಲ್ಲಿ ಕೆಲವು ಮುಸ್ಲಿಂ ಸಂದರ್ಶಕರು ನಮಾಝ್ ಮಾಡಿದ್ದ ಸ್ಥಳವನ್ನು ಬಿಜೆಪಿ ಸಂಸದೆ ಮೇಧಾ ಕುಲಕರ್ಣಿ ಹಾಗು ಆಕೆಯ ಬೆಂಬಲಿಗರು ಗೋಮೂತ್ರದಿಂದ 'ಶುದ್ಧೀಕರಿಸಿದ' ಘಟನೆ ನಡೆದಿದೆ. 

ಇದಕ್ಕೆ ನೇತೃತ್ವ ನೀಡಿದ ಬಿಜೆಪಿ ರಾಜ್ಯಸಭಾ ಸಂಸದೆ ಮೇಧಾ ಕುಲಕರ್ಣಿ ಅವರ ವಿರುದ್ಧ ವಿರೋಧ ಪಕ್ಷಗಳು ಮತ್ತು ಸಾಮಾಜಿಕ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ರಾಜೀನಾಮೆಗಾಗಿ ಒತ್ತಾಯಿಸಿದೆ.

ದೀಪಾವಳಿಯ ಸಂದರ್ಭದಲ್ಲಿ ಸಂಸದೆ ನಡೆಸಿದ ಈ ಕ್ರಮವನ್ನು ವಿರೋಧ ಪಕ್ಷಗಳು ಧಾರ್ಮಿಕ ದ್ವೇಷ ಪ್ರಚೋದನೆಯಾಗಿದೆ ಎಂದು ಆರೋಪಿಸಿವೆ.

'ಶುದ್ಧೀಕರಣ' ನಡೆಸಿದ ಬಳಿಕ ರಾಜ್ಯ ಸಭಾ ಸದಸ್ಯೆ ಮೇಧಾ ಕುಲಕರ್ಣಿ ಅವರು, “ಶನಿವಾರವಾಡದಂತಹ ಐತಿಹಾಸಿಕ ಸ್ಥಳದಲ್ಲಿ ಮುಸ್ಲಿಮರು ನಮಾಝ್ ಸಲ್ಲಿಸುತ್ತಿದ್ದಾರೆ. ಹಿಂದೂಗಳಿಗೂ ಮಸೀದಿಗಳಲ್ಲಿ ಆರತಿ ಮಾಡಲು ಅವಕಾಶ ನೀಡಬೇಕು,” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಮಹಾರಾಷ್ಟ್ರದ ಕಾಂಗ್ರೆಸ್‌ನ ಮುಖ್ಯ ವಕ್ತಾರ ಅತುಲ್ ಲೋಂಧೆ ಅವರು, “ಮರಾಠವಾಡದ ರೈತರು ಪ್ರವಾಹದಿಂದ ಹಾನಿಗೊಳಗಾಗಿರುವ ಸಂದರ್ಭದಲ್ಲಿ ಕುಲಕರ್ಣಿ ದ್ವೇಷ ಪ್ರಚಾರದಲ್ಲಿ ತೊಡಗಿದ್ದಾರೆ. ಜನರ ನಿಜವಾದ ಸಮಸ್ಯೆಗಳಿಂದ ಗಮನ ಬೇರೆಡೆ ತಿರುಗಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಜನಪ್ರತಿನಿಧಿಯಾಗಿ ಅವರು ತಮ್ಮ ಕರ್ತವ್ಯಕ್ಕೆ ನ್ಯಾಯ ಒದಗಿಸುತ್ತಿಲ್ಲ. ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡಬೇಕು,” ಎಂದು ಆಗ್ರಹಿಸಿದ್ದಾರೆ.

"ರೈತ ಕುಟುಂಬಗಳಿಗೆ ದೀಪಾವಳಿ ಆಚರಿಸಲು ಹಣವಿಲ್ಲ. ರಾಜ್ಯ ಸರ್ಕಾರವು ಆನಂದಚಾ ಶೈಡೆ ಕಲ್ಯಾಣ ಯೋಜನೆಯನ್ನು ನಿಲ್ಲಿಸಿದೆ. ರೈತರಿಗೆ ಯಾವುದೇ ಸಹಾಯ ಸಿಗುತ್ತಿಲ್ಲ... ಹಿಂದೂಗಳು ದೀಪಾವಳಿ ಆಚರಿಸುವಾಗ, ಸಂಭ್ರಮ ಹಂಚುತ್ತಾರೆ. ಆದರೆ ಸಂಸದೆ ಮೇಧಾ ಕುಲಕರ್ಣಿ ದ್ವೇಷವನ್ನು ಹಂಚುತ್ತಿದ್ದಾರೆ. ಒಬ್ಬ ಜನಪ್ರತಿನಿಧಿಯು ಜನರ ಹಿತಾಸಕ್ತಿಗೆ ವಿರುದ್ಧವಾಗಿ ಅಲ್ಲ, ಜನರಿಗಾಗಿ ಕೆಲಸ ಮಾಡಬೇಕು", ಎಂದು ಅತುಲ್ ಲೋಂಧೆ ಅವರು ಸಂಸದೆಯ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

“ಕುಲಕರ್ಣಿ ಅವರ ಈ ನಡೆ ದಿಲ್ಲಿಯಲ್ಲಿರುವ ಮೇಲಧಿಕಾರಿಗಳನ್ನು ಮೆಚ್ಚಿಸಲು ಮಾಡಿದ ಪ್ರದರ್ಶನ. ಜನವಿರೋಧಿ ಚಟುವಟಿಕೆಗಳಲ್ಲಿ ತೊಡಗಲು ಬಯಸಿದರೆ, ಅವರು ಸಂಸತ್ತಿನಿಂದ ರಾಜೀನಾಮೆ ನೀಡಿ ತಮ್ಮ ಸಂಘಟನೆಗಳಲ್ಲಿ ಕೆಲಸ ಮಾಡಲಿ. ಅವರು ಎಲ್ಲ ಜನರನ್ನು ಸಂಸತ್ತಿನಲ್ಲಿ ಪ್ರತಿನಿಧಿಸುವ ಸಂಸದೆ. ತನ್ನ ಜವಾಬ್ದಾರಿಯನ್ನು ಅವರು ಮರೆತಂತೆ ತೋರುತ್ತದೆ,” ಎಂದು ಆಮ್ ಆದ್ಮಿ ಪಕ್ಷದ ವಕ್ತಾರ ಮುಕುಂದ್ ಕಿರ್ದತ್ ಅವರು ಪ್ರತಿಕ್ರಿಯಿಸಿದ್ದಾರೆ.

“ಇತಿಹಾಸ ಓದಿದರೆ, ಶನಿವಾರವಾಡದಲ್ಲಿ ಬಾಜಿರಾವ್ ಪೇಶ್ವೆಯ ಕಾಲದಲ್ಲಿ ಮುಸ್ಲಿಂ ಮಹಿಳೆ ಮಸ್ತಾನಿ ವಾಸಿಸುತ್ತಿದ್ದರು ಎಂದು ತಿಳಿಯುತ್ತದೆ. ಪೇಶ್ವೆಯವರೇ ಮಸ್ತಾನಿಯನ್ನು ಕರೆತಂದಿದ್ದರು. ಹಾಗಾದರೆ ಕುಲಕರ್ಣಿ ಅವರು ಇಡೀ ಶನಿವಾರವಾಡವನ್ನೇ ಶುದ್ಧೀಕರಿಸಲಿದ್ದಾರೆಯೇ? ಈ ಕೃತ್ಯ ಖಂಡನೀಯವಾಗಿದ್ದು, ಸಂಸದೆ ಸ್ಥಾನಕ್ಕೆ ಅವರು ಯೋಗ್ಯರಲ್ಲ. ಮೇಧಾ ಕುಲಕರ್ಣಿ ತಾವಾಗಿಯೇ ರಾಜೀನಾಮೆ ನೀಡುವುದಿಲ್ಲ ಪುಣೆಯ ಜನರೇ ಅವರನ್ನು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಬೇಕು,” ಎಂದು ಸಾಮಾಜಿಕ ನಾಗರಿಕ ಹಕ್ಕು ಸಮಿತಿಯ ಮುಖ್ಯಸ್ಥ, ಸಾಮಾಜಿಕ ಕಾರ್ಯಕರ್ತ ಮಾನವ್ ಕಾಂಬ್ಳೆ ಅವರು ಹೇಳಿದ್ದಾರೆ.

“ಪುಣೆಯ ಜನರು ಸಂಚಾರ ದಟ್ಟಣೆ, ಕಸದ ಸಮಸ್ಯೆ ಹಾಗೂ ಹೆಚ್ಚುತ್ತಿರುವ ಅಪರಾಧಗಳ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಸಂಸದೆ ಶನಿವಾರವಾಡದ ‘ಶುದ್ಧೀಕರಣ’ದಲ್ಲಿ ತೊಡಗಿದ್ದಾರೆ. ಅವರು ಯಾವುದೋ ಮೂಲೆಯಲ್ಲಿ ಹಸಿರು ಬಣ್ಣವನ್ನು ಹುಡುಕಿ ಅದರ ಮೇಲೆ ಕೇಸರಿ ಬಣ್ಣ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ಅವರ ಪಕ್ಷದ ಸಹೋದ್ಯೋಗಿ ಸಂಸದ ಮುರಳೀಧರ್ ಮೊಹಲ್ ಕೂಡ ಬಿಲ್ಡರ್‌ಗಳಿಗೆ ಬೇಕಾದದ್ದನ್ನು ಪಡೆಯಲು ಸಹಾಯ ಮಾಡುವುದರಲ್ಲೇ ನಿರತರಾಗಿದ್ದಾರೆ", ಎಂದು ಸ್ಥಳೀಯ ಕಾರ್ಯಕರ್ತ ವಿಶ್ವಂಭರ್ ಚೌಧರಿ ಅವರು ಆರೋಪಿಸಿದ್ದಾರೆ.


Ads on article

Advertise in articles 1

advertising articles 2

Advertise under the article