ಕಾಪು ದಂಡತೀರ್ಥ ಶಾಲೆಯಲ್ಲಿ ಅ.11ರಂದು ಬೃಹತ್ ಉದ್ಯೋಗ ಮೇಳ: ವಿನಯ್ ಕುಮಾರ್ ಸೊರಕೆ

ಕಾಪು ದಂಡತೀರ್ಥ ಶಾಲೆಯಲ್ಲಿ ಅ.11ರಂದು ಬೃಹತ್ ಉದ್ಯೋಗ ಮೇಳ: ವಿನಯ್ ಕುಮಾರ್ ಸೊರಕೆ


ಕಾಪು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಉಡುಪಿ ಜಿಲ್ಲೆಯ ವತಿಯಿಂದ "ಉಚಿತ ಬೃಹತ್ ಉದ್ಯೋಗ ಮೇಳವು ಕಾಪು ದಂಡತೀರ್ಥ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ.11ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 3ರ ವರೆಗೆ ನಡೆಯಲಿದೆ ಎಂದು ಉದ್ಯೋಗ ಮೇಳದ ರೂವಾರಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ತಿಳಿಸಿದರು.

ಅವರು ಕಾಪು ಪತ್ರಿಕಾ ಭವನದಲ್ಲಿ ಮಂಗಳವಾರ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನಿರುದ್ಯೋಗಿ ಯುವಕ, ಯುವತಿಯರಿಗಾಗಿ ರಾಜ್ಯ ಹಾಗೂ ಸ್ಥಳೀಯ ಸುಮಾರು 50ಕ್ಕಿಂತ ಹೆಚ್ಚಿನ ಪ್ರತಿಷ್ಟಿತ ಕಂಪೆನಿಗಳು, ಸೌದಿಯ ಹೊಟೇಲ್ ಉದ್ಯಮವೂ ಭಾಗವಹಿಸಲಿದೆ. ಸೌದಿಯ ಹೊಟೇಲ್‍ಗೆ 350ಕ್ಕೂ ಅಧಿಕ ಉದ್ಯೋಗಿಗಳ ಅವಶ್ಯಕತೆ ಇದ್ದು, ಇಲ್ಲಿ ನೇಮಕಾತಿ ನಡೆಯಲಿದೆ. ಇದೊಂದು ಜಿಲ್ಲಾ ಮಟ್ಟದ ಮೇಳವಾಗಿದ್ದು, ಜಿಲ್ಲೆಯ ಎಲ್ಲಾ ಸರಕಾರಿ, ಖಾಸಗಿ, ಪದವಿಪೂರ್ವ ಕಾಲೇಜಿನ ಮತ್ತು ಪದವಿ ಕಾಲೇಜು, ಐಟಿಐ, ಸ್ನಾತಕೋತ್ತರ ಪದವಿ, ಎಂ.ಬಿ.ಎ. ಇಂಜಿನಿಯರಿಂಗ್, ಇನ್ನಿತರ ಶೈಕ್ಷಣಿಕ ಅರ್ಹತೆ ಪಡೆದ ಉದ್ಯೋಗಾಕಾಂಕ್ಷಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದರು.

ಹತ್ತು ಸಾವಿರ ಉದ್ಯೋಗವಕಾಶ: ಇಲ್ಲಿ ನಡೆಯುವ ಉದ್ಯೋಗ ಮೇಳದಲ್ಲಿ 45 ವಯೋಮಾನದವರೆಗೆ ಉದ್ಯೋಗವಕಾಶಗಳಿವೆ. ಐಟಿ ಬಿಟಿ, ಆಟೋಮೊಬೈಲ್ ಎಜುಕೇಷನ್, ರಿಟೇಲ್, ಮಾರ್ಕೆಟಿಂಗ್, ಹೌಸ್ ಕೀಪಿಂಗ್, ಪಾರ್ಮಸಿ, ಇನ್ಸೂರೆನ್ಸ್, ಬ್ಯಾಂಕ್ ಲೋನ್, ಬ್ಯಾಂಕಿಂಗ್, ಹೋಟೆಲ್ ಮ್ಯಾನೆಜ್ಮೆಂಟ್, ಇಲೆಕ್ಟ್ರಿಕಲ್ಸ್, ಫಿಟ್ಟರ್, ನಸಿರ್ಂಗ್ ಇತ್ಯಾದಿ ಕ್ಷೇತ್ರಗಳಲ್ಲಿ ಉದ್ಯೋಗ ಲಭಿಸಲಿದೆ.

ಭಾಗವಹಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ 10 ಸ್ವವಿವರರಗಳನ್ನು ತರತಕ್ಕದ್ದು, ಒಬ್ಬರಿಗೆ 10 ಸಂಸ್ಥೆಗಳಿಗೂ ಸ್ವವಿವರ ಸಲ್ಲಿಸಬಹುದು. ಅವರ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಉದ್ಯೋಗ ನೀಡಲಾಗುವುದು ಅಲ್ಲದೆ ಯಾವ ಕಂಪೆನಿಯಲ್ಲಿ ಉದ್ಯೋಗ ಬಯಸುತ್ತಾರೊ ಅದನ್ನು ಪಡೆಯಲು ಅವಕಾಶವಿದ್ದು ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಯಾಯ ಕಂಪೆನಿಗಳು ಕಾರ್ಯಕ್ರಮದ ದಿನದಂದೇ ನೇಮಕಾತಿ ಪತ್ರ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಪ್ರಚಾರ ಸಮಿತಿಯ ಉಪಾಧ್ಯಕ್ಷ ಶ್ರೀನಿವಾಸ್ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಕುಮಾರ್, ಹರೀಶ್ ಕಿಣಿ, ಜಿತೇಂದ್ರ ಪುಟಾರ್ಡೋ, ಕಾಪು ದಿವಾಕರ ಶೆಟ್ಟಿ, ಡಾ.ಸಂತೋಷ್ ಕುಮಾರ್, ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article