ಸುರತ್ಕಲ್ ನಲ್ಲಿ ಇಬ್ಬರಿಗೆ ಚೂರಿ ಇರಿತ ಪ್ರಕರಣ: ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ ಪೊಲೀಸರು
ಸುರತ್ಕಲ್: ಕ್ಷುಲ್ಲಕ ಕಾರಣಕ್ಕೆ ಯುವಕರಿಬ್ಬರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದ ನಾಲ್ಕು ಮಂದಿ ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸುರತ್ಕಲ್ ಕಟ್ಲ ನಿವಾಸಿಗಳಾದ ಸುಶಾಂತ್ ಯಾನೆ ಕಡವಿ (29), ಕೆ.ವಿ. ಅಲೆಕ್ಸ್ (27), ಸುರತ್ಕಲ್ ಇಂದಿರಾ ಕಟ್ಟೆ ನಿವಾಸಿ ನಿತಿನ್ (26) ಮತ್ತು ಆರೋಪಿಗಳಿಗೆ ಆಶ್ರಯ ನೀಡಿದ ಕುಳಾಯಿ ಹೊನ್ನಕಟ್ಟೆ ನಿವಾಸಿ ಅರುಣ್ ಶೆಟ್ಟಿ (56) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ, ರೌಡಿ ಶೀಟರ್, ಸಂಘ ಪರಿವಾರದ ಕಾರ್ಯಕರ್ತ ಗುರುರಾಜ್ ಮತ್ತು ಆರೋಪಿ ಗಳಿಗೆ ಆಶ್ರಯ ನೀಡಿದ್ದ ಅಶೋಕ್ ಎಂಬವರು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗುರುವಾರ ರಾತ್ರಿ ಕ್ಷುಲ್ಲಕ ಕಾರಣಕ್ಕಾಗಿ ಸುರತ್ಕಲ್ ಬಳಿಯ ದೀಪಕ್ ಬಾರ್ ಬಳಿ ಹಸನ್ ಮುಕ್ಷಿತ್ ಮತ್ತು ನಿಝಾಮ್ ಎಂಬವರಿಗೆ ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗುರುರಾಜ್, ಅಲೆಕ್ಸ್ ಸಂತೋಷ್, ನಿತಿನ್ ಮತ್ತು ಸುಶಾಂತ್ ಸೇರಿಕೊಂಡು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಆರೋಪಿತರ ಪತ್ತೆ ಮತ್ತು ಬಂಧನ ಕಾರ್ಯಾಚರಣೆ ಮಂಗಳೂರು ನಗರ ಉಪ ಪೊಲೀಸ್ ಆಯುಕ್ತ (ಅಪರಾಧ ಮತ್ತು ಸಂಚಾರ) ರವಿಶಂಕರ್ ರವರ ನಿರ್ದೇಶನದಲ್ಲಿ, ಸಹಾಯಕ ಪೊಲೀಸ್ ಆಯುಕ್ತ (ಉತ್ತರ ಉಪವಿಭಾಗ) ಶ್ರೀಕಾಂತ್ ಕೆ ರವರ ಮಾರ್ಗದರ್ಶನದಲ್ಲಿ ಮತ್ತು ಸುರತ್ಕಲ್ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ ರವರ ನೇತೃತ್ವದಲ್ಲಿ ನಡೆದಿದ್ದು, ಕಾರ್ಯಾಚರಣೆಯಲ್ಲಿ ಪಿಎಸ್ಐ ಗಳು ರಾಘವೇಂದ್ರ ನಾಯ್ಕ್, ಜನಾರ್ಧನ ನಾಯ್ಕ್, ಶಶಿಧರ ಶೆಟ್ಟಿ, ಎಎಸ್ಐ ಗಳು ರಾಜೇಶ್ ಆಳ್ವ, ತಾರನಾಥ, ರಾಧಾಕೃಷ್ಣ ಮತ್ತು ಸಿಬ್ಬಂದಿಯರಾದ ಅಣ್ಣಪ್ಪ, ಉಮೇಶ್ ಕುಮಾರ್, ತಿರುಪತಿ, ಅಜಿತ್ ಮ್ಯಾಥ್ಯೂ, ರಾಮು ಕೆ, ಕಾರ್ತೀಕ್, ವಿನೋದ್, ಸಿಸಿಬಿ ಘಟಕದ ಅಧಿಕಾರಿಗಳು, ಎಸ್ಎಎಫ್ ಟೀಮ್ ಹಾಗೂ ಶ್ವಾನ ದಳ ಭಾಗವಹಿಸಿದ್ದರು.