ದುಬೈ; ಲಕ್ಷಾಂತರ ಮಂದಿ ಭಾಗಿಯಾದ 'ದುಬೈ ರನ್' ಫಿಟ್‌ನೆಸ್ ಹಬ್ಬದಲ್ಲಿ ಗಮನ ಸೆಳೆದ 'ಬ್ಯಾರಿಗಳು'
ಹಿದಾಯತ್ ಅಡ್ಡೂರು ನೇತೃತ್ವದಲ್ಲಿ ಭಾಗಿಯಾದ ಸಾವಿರಾರು ಅನಿವಾಸಿ ಬ್ಯಾರಿಗಳು
ದುಬೈ: ದುಬೈನಲ್ಲಿ ಫಿಟ್‌ನೆಸ್(ದೈಹಿಕ ಕ್ಷಮತೆ) ಚಾಲೆಂಜ್‌ನ ಭಾಗವಾಗಿ ರವಿವಾರ ಆಯೋಜಿಸಲಾಗಿದ್ದ 'ದುಬೈ ರನ್-2025' ಏಳನೇ ಆವೃತ್ತಿಯಲ್ಲಿ 3,07,000 ಓಟಗಾರರು ಭಾಗವಹಿಸುವ ಮೂಲಕ ಬಹಳ ಅದ್ದೂರಿ ಹಾಗು ಯಶಸ್ವಿಯಾಗಿ ಪೂರ್ಣಗೊಂಡಿದೆ.
ದುಬೈಯ ಶೇಖ್ ಝಾಯೆದ್ ರಸ್ತೆಯಲ್ಲಿ 5 ಹಾಗು 10 ಕಿ.ಮೀ ಓಟದಲ್ಲಿ ಹಿರಿಯರು, ಕಿರಿಯರು, ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲ ವಯೋಮಿತಿಯ ಲಕ್ಷಾಂತರ ಮಂದಿ ಅತೀ ಉತ್ಸಾಹದಿಂದ ಭಾಗವಹಿಸುವ ಮೂಲಕ 'ದುಬೈ ರನ್'ನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
ಫಿಟ್‌ನೆಸ್ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ 'ದುಬೈ ರನ್' ಓಟವು ಶೇಖ್ ಝಾಯೆದ್ ರಸ್ತೆ, ದುಬೈ ಡೌನ್‌ಟೌನ್, ಮ್ಯೂಸಿಯಂ ಆಫ್ ದಿ ಫ್ಯೂಚರ್, ಎಮಿರೇಟ್ಸ್ ಟವರ್ಸ್, ದುಬೈ ಒಪೇರಾ ಮತ್ತು ಬುರ್ಜ್ ಖಲೀಫಾದ ಸುತ್ತ ನಡೆಯಿತು.
ಈ 'ದುಬೈ ರನ್' ಓಟದಲ್ಲಿ ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಸ್(BCCI) ಅಧ್ಯಕ್ಷ ಹಿದಾಯತ್ ಅಡ್ಡೂರು ನೇತೃತ್ವದಲ್ಲಿ ಬ್ಯಾರಿ ಸಮುದಾಯದ ಸಾವಿರಾರು ಮಂದಿ ಪಾಲ್ಗೊಳ್ಳುವ ಮೂಲಕ ಎಲ್ಲರ ಗಮನ ಸೆಳೆದರು.
ಯುಎಇಯಲ್ಲಿರುವ ನೆಲೆಸಿರುವ ಅನಿವಾಸಿ ಬ್ಯಾರಿಗಳು, ತಮ್ಮದೇ ಆದ 'ದುಬೈ ಬ್ಯಾರೀಸ್' ಮುದ್ರಿತ ಟೀ-ಶರ್ಟ್ ಧರಿಸಿ, ಓಟದ ಟ್ರ್ಯಾಕ್'ನಲ್ಲಿ ಅತೀ ಉದ್ದನೆಯ ಯುಎಇ ಧ್ವಜವನ್ನು ಹಿಡಿದು, ಹಳೆಯ ಕನ್ನಡ, ಬ್ಯಾರಿ ಹಾಡುಗಳನ್ನು ಹಾಡುತ್ತ 'ದುಬೈ ರನ್' ಯಶಸ್ಸಿಗೆ ತಮ್ಮದೇ ಕೊಡುಗೆಯನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವೇಳೆ ಬ್ಯಾರಿ ಸಮುದಾಯದವರ ಕೈಯಲ್ಲಿದ್ದ ಯುಎಇ ಧ್ವಜದ ಚಿತ್ರಣವನ್ನು ಕಂಡ ದುಬೈ ರಾಜಕುಮಾರ ಶೇಖ್ ಹಮ್ದಾನ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದು, ಇದು 'ದುಬೈ ರನ್' ಓಟದಲ್ಲಿ ಪಾಲ್ಗೊಂಡ ಬ್ಯಾರಿ ಸಮುದಾಯದ ಜನರಲ್ಲಿ ಹೆಮ್ಮೆಯನ್ನು ತಂದುಕೊಟ್ಟಿದೆ.
ಹಿದಾಯತ್ ಅಡ್ಡೂರು ಅವರ ಸಾರಥ್ಯದಲ್ಲಿ ಅಶ್ರಫ್ ಶಾ ಮಾಂತೂರು, ಸಲೀಂ ಮೂಡಬಿದ್ರೆ, ಸಮದ್ ಬಿರಾಲಿ, ಮೊಹಮ್ಮದ್ ಆಶಿಕ್(ಬದ್ರಿಯಾ ಫ್ರೆಂಡ್ಸ್), ಇಕ್ರಂ ಮೂಳೂರು, ಸಂಶುದ್ದೀನ್ ಪಿಲಿಗೊಡು, ನೌಫಾಲ್, ಅಕ್ಬರ್, ಯೂಸುಫ್ ಶೇಖ್, ಅದ್ದು ಹೊನ್ನಾವರ, ಸೋಶಿಯಲ್ ಇನ್ಫ್ಲ್ಯೂಎನ್ಸೆರ್ ನಝೀಹ ಫಾತಿಮಾ, ಶುಕೂರ್ ಉಳ್ಳಾಲ, ಆಸೀಫ್ ಕಣ್ಣಂಗಾರ್, ನವಾಝ್ ಕೊಳ್ತಮಜಲು, ನಝೀರ್ ವಾಮಂಜೂರು, ಸನಾನ್ ಸೇರಿದಂತೆ ಸಾವಿರಾರು ಮಂದಿ ಬ್ಯಾರಿಗಳು ಕುಟುಂಬ ಸಮೇತರಾಗಿ ಓಟದಲ್ಲಿ ಭಾಗವಹಿಸುವ ಮೂಲಕ 'ದುಬೈ ರನ್' ಓಟಕ್ಕೆ ಬೆಂಬಲವನ್ನು ನೀಡಿದ್ದಾರೆ.








