ಅಕ್ಷತಾ ಪೂಜಾರಿ ಮೇಲೆ ಪೊಲೀಸರ ದೌರ್ಜನ್ಯ ಆರೋಪ: ಸುಳ್ಳು ಎಫ್ಐಆರ್ ದಾಖಲಿಸಿದ ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸಿ; ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ನೇತೃತ್ವದಲ್ಲಿ ಧರಣಿ
ಉಡುಪಿ: ಅಕ್ಷತಾ ಪೂಜಾರಿ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿ ಹಾಗೂ ಸುಳ್ಳು ಎಫ್ಐಆರ್ ದಾಖಲಿಸಿದ ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ನೇತೃತ್ವದಲ್ಲಿ ಬಿಲ್ಲವ ಸಮಾಜದವರು ಬ್ರಹ್ಮಾವರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ಪೊಲೀಸ್ ಠಾಣೆಯ ಮುಂಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಬಿಲ್ಲವ ಸಮಾಜದವರು ಅಕ್ಷತಾ ಪೂಜಾರಿ ಅವರಿಗೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ, ಆಕೆ ಹಾಗೂ ಆಕೆಯ ತಾಯಿಯ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೌರ್ಜನ್ಯ ಎಸಗಿದ ಅಧಿಕಾರಿಗಳ ವಿರುದ್ಧ ಕೂಡಲೇ ಎಫ್ ಐಆರ್ ದಾಖಲಿಸಬೇಕು. ಇಲ್ಲದಿದ್ದರೆ ಇಲ್ಲಿಂದ ಹೋಗುವುದಿಲ್ಲ ಎಂದು ಪಟ್ಟುಹಿಡಿದರು. ಅಕ್ಷತಾಳಿಗೆ ನ್ಯಾಯ ಸಿಗದಿದ್ದರೆ ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ. ದೌರ್ಜನ್ಯ ಎಸಗಿದ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಿ ಅವರನ್ನು ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಪೂಜಾರಿ ಮಾತನಾಡಿ, ಅಕ್ಷತಾ ಪೂಜಾರಿ ನೀಡಿದ ದೂರಿನಂತೆ ಎಫ್ಐಆರ್ ದಾಖಲಿಸಬೇಕು. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಸುಳ್ಳು ಎಫ್ಐಆರ್ ದಾಖಲಿಸಿದ್ದಾರೆ. ಪೊಲೀಸರು ಬೆಳಿಗ್ಗೆ ನಾಲ್ಕು ಗಂಟೆಗೆ ಮನೆಗೆ ಹೋಗಿರುವುದು ಅಕ್ರಮ. ಹೀಗಾಗಿ ಅಕ್ಷತಾ ಮನೆಗೆ ಹೋಗಿ ದೌರ್ಜನ್ಯ ಎಸಗಿದ ಅಧಿಕಾರಿಗಳನ್ನು ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
