ಗೋವಾ ನೈಟ್‌ಕ್ಲಬ್ ಬೆಂಕಿ ದುರಂತದಲ್ಲಿ 25 ಜನ ಸಾವು; ರಾತ್ರೋರಾತ್ರಿ ಇಂಡಿಗೋ ವಿಮಾನದಲ್ಲಿ ಥೈಲ್ಯಾಂಡ್‌ಗೆ ಪರಾರಿಯಾದ ಮಾಲೀಕರು!
ಪಣಜಿ: ಶನಿವಾರ ರಾತ್ರಿ (ಡಿ.6) ಸಂಭವಿಸಿದ ಬೆಂಕಿ ಅವಘಡದಲ್ಲಿ 25 ಜನರು ಸಾವನ್ನಪ್ಪಿದ ಗೋವಾ ನೈಟ್ ಕ್ಲಬ್‌ನ ಇಬ್ಬರು ಮಾಲೀಕರು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಭಾರತದಿಂದ ಥೈಲ್ಯಾಂಡ್‌ಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನೈಟ್‌ಕ್ಲಬ್ ಮಾಲೀಕರಾದ ಗೌರವ್ ಮತ್ತು ಸೌರಭ್ ಲುತ್ರಾ ಅವರಿಗಾಗಿ ಪೊಲೀಸರು ಲುಕ್‌ಔಟ್ ನೋಟೀಸ್ ಜಾರಿಗೊಳಿಸಿದ್ದಾರೆ.
ಗೋವಾ ನೈಟ್‌ಕ್ಲಬ್ ಅಗ್ನಿ ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಂಡಿರುವ ಗೋವಾ ಪೊಲೀಸರು, ನೈಟ್‌ಕ್ಲಬ್ ಮಾಲೀಕರನ್ನು ಹುಡುಕಿಕೊಂಡು ದೆಹಲಿಗೆ ತೆರಳಿತ್ತು. ಆದರೆ ಗೌರವ್ ಮತ್ತು ಸೌರಭ್ ಲುತ್ರಾ ಇಬ್ಬರೂ ಥೈಲ್ಯಾಂಡ್‌ಗೆ ಪರಾರಿಯಾಗಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಅಗ್ನಿ ದುರಂತಕ್ಕೆ ತೀವ್ರ ದು:ಖ ವ್ಯಕ್ತಪಡಿಸಿದ್ದ ಗೌರವ್ ಮತ್ತು ಸೌರಭ್,ಈ ಕುರಿತು ಸುದೀರ್ಘ ಪತ್ರವೊಂದನ್ನು ಬಿಡುಗಡೆ ಮಾಡಿದ್ದರು. ಇದರಲ್ಲಿ ಅಗ್ನಿ ದುರಂತದಲ್ಲಿ ಮಡಿದವರ ಕುಟುಂಬಸ್ಥರೊಂದಿಗೆ ನಿಲ್ಲುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಮೃತಪಟ್ಟವರ ಕುಟುಂಬಕ್ಕೆ ನೆರವಾಗುವುದಿರಲಿ, ಪೊಲೀಸ್ ವಿಚಾರಣೆಯನ್ನೂ ತಪ್ಪಿಸಿಕೊಂಡು ಥೈಲ್ಯಾಂಡ್‌ಗೆ ಪರಾರಿಯಾಗಿದ್ದಾರೆ.
ಗೌರವ್ ಮತ್ತು ಸೌರಭ್ ಲುತ್ರಾ ಪತ್ತೆ ಲುಕ್‌ಔಟ್ ನೋಟೀಸ್ ಜಾರಿ ಮಾಡುವಂತೆ ಪೊಲೀಸರು ಮಾಡಿದ ಮನವಿಯನ್ನು, ವಲಸೆ ಬ್ಯುರೋ ಪುರಸ್ಕರಿಸಿದೆ. ದೇಶದ ಪ್ರತಿಯೊಂದು ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ಪ್ರವೇಶ ಮತ್ತು ನಿರ್ಗಮನ ಹಂತದಲ್ಲಿ ಅಧಿಕಾರಿಗಳಿಗೆ ಲುಕ್ಔಟ್ ಸುತ್ತೋಲೆ ಎಚ್ಚರಿಕೆ ನೀಡಲಾಗಿದೆ.
ಮುಂಬೈ ವಿಮಾನ ನಿಲ್ದಾಣದ ವಲಸೆ ಬ್ಯೂರೋಗೆ ತಿಳಿದು ಬಂದ ಮಾಹಿತಿಯ ಪ್ರಕಾರ, ಭಾನುವಾರ (ಡಿ.7) ಬೆಳಿಗ್ಗೆ 5.30ಕ್ಕೆ ಗೌರವ್ ಮತ್ತು ಸೌರಭ್ ಥೈಲ್ಯಾಂಡ್‌ನ ಫುಕೆಟ್‌ಗೆ ಹಾರಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗಳು ಇಂಡಿಗೋ ವಿಮಾನ 6E-1073 ವಿಮಾನದಲ್ಲಿ ಥೈಲ್ಯಾಂಡ್‌ಗೆ ಪರಾರಿಯಾಗಿದ್ದಾರೆ. ತನಿಖೆಯಿಂದ ತಪ್ಪಿಸಿಕೊಳ್ಳಲು ಅವರು ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಗೋವಾದ ರೋಮಿಯೋ ಲೇನ್‌ನಲ್ಲಿರುವ ಬಿರ್ಚ್ ಬೈ ನೈಟ್‌ಕ್ಲಬ್‌ನಲ್ಲಿ ಬೆಂಕಿ ಅವಘಢ ಸಂಭವಿಸಿತ್ತು. ಈ ಘಟನೆಯಲ್ಲಿ ನೈಟ್‌ಕ್ಲಬ್‌ನ 20 ಸಿಬ್ಬಂದಿ ಮತ್ತು 5 ಪ್ರವಾಸಿಗರು ಸೇರಿದಂತೆ ಒಟ್ಟು 25 ಜನ ಅಸುನೀಗಿದ್ದರು. ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಗೋವಾ ಪೊಲೀಸರು ದೆಹಲಿಯಲ್ಲಿದ್ದ ಈ ನೈಟ್‌ಕ್ಲಬ್ ಮಾಲೀಕರನ್ನು ಬಂಧಿಸಲು ಕಾರ್ಯಾಚರಣೆ ಆರಂಭಿಸಿದ್ದರು.
ಆದರೆ ಗೌರವ್ ಮತ್ತು ಸೌರಭ್ ಥೈಲ್ಯಾಂಡ್‌ಗೆ ಪರಾರಿಯಾಗಿದ್ದರೆ, ಮೂರನೇ ಮಾಲೀಕ ಭರತ್ ಕೊಹ್ಲಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಗೋವಾಗೆ ಕರೆತಂದಿದ್ದಾರೆ. ಕ್ಲಬ್‌ಗೆ ಪರವಾನಗಿ ನೀಡುವಲ್ಲಿ ತೊಡಗಿರುವ ಬಹು ಸರ್ಕಾರಿ ಇಲಾಖೆಗಳ ಅಧಿಕಾರಿಗಳನ್ನು ಕೂಡ ವಿಚಾರಣೆಗೆ ಕರೆಸಲಾಗಿದೆ.
" ಸಂಭಾವ್ಯ ಅನುಸರಣೆ ಲೋಪಗಳು ಮತ್ತು ಕಾರ್ಯವಿಧಾನದ ಉಲ್ಲಂಘನೆಗಳನ್ನು ಪರಿಶೀಲಿಸಲು, ತನಿಖೆಯನ್ನು ಆದ್ಯತೆಯ ಮೇಲೆ ನಡೆಸಲಾಗುತ್ತಿದೆ ಮತ್ತು ಅದರ ಸಂಶೋಧನೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಗೋವಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ.