ಡಿ.25ರಂದು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನಿಂದ 14 ಮನೆಗಳ ಹಸ್ತಾಂತರ
ಉಳ್ಳೂರು ಕೊರಗರ ಕಾಲೋನಿಯಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮನೆಗಳ ಹಸ್ತಾಂತರ
ಉಡುಪಿ: ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ವತಿಯಿಂದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಉಳ್ಳೂರು ಗ್ರಾಮದ ಕೊರಗರ ಕಾಲೋನಿಯಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ 14 ಮನೆಗಳ ಗೃಹಪೂಜೆ ಮತ್ತು ಲೋಕಾರ್ಪಣೆ ಕಾರ್ಯಕ್ರಮ ಇದೇ ಡಿ. 25ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಡಾ. ಎಚ್.ಎಸ್. ಶೆಟ್ಟಿ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಗೃಹಪೂಜೆ ನೆರವೇರಿಸಿ, ಆಶೀರ್ವಚನ ನೀಡಲಿದ್ದಾರೆ. ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಡಾ. ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮನೆಗಳನ್ನು ಲೋಕಾರ್ಪಣೆಗೊಳಿಸಿ, ಆಶಯ ಭಾಷಣ ಮಾಡಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಗೃಹಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಿದ್ದಾರೆ ಎಂದರು.