ಉಡುಪಿಯಲ್ಲಿ 15ನೇ ದಿನಕ್ಕೆ ಕಾಲಿಟ್ಟ ಕೊರಗ ಸಮುದಾಯದ ಅಹೋರಾತ್ರಿ ಧರಣಿ; ಜಿಲ್ಲಾಡಳಿತದ ನಿರ್ಲಕ್ಷ್ಯ ಖಂಡಿಸಿ ಕಪ್ಪುಪಟ್ಟಿ ಧರಿಸಿ ಮೌನ ಸತ್ಯಾಗ್ರಹ
ಸರಕಾರಿ ಉದ್ಯೋಗ ನೇರನೇಮಕಾತಿಗೆ ಆಗ್ರಹಿಸಿ ಅಹೋರಾತ್ರಿ ಧರಣಿ
ಉಡುಪಿ: ಕೊರಗ ಸಮುದಾಯದ ಯುವಜನರಿಗೆ ಸರಕಾರಿ ಉದ್ಯೋಗ ನೇರನೇಮಕಾತಿಗೆ ಒತ್ತಾಯಿಸಿ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳ ಇದರ ವತಿಯಿಂದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹವು 15 ದಿನಕ್ಕೆ ಕಾಲಿಟ್ಟಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯ ಖಂಡಿಸಿ ಕೊರಗ ಸಮುದಾಯದವರು ಸೋಮವಾರ ಕೈಗೆ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು. ಒಕ್ಕೂಟದ ಸಂಯೋಜಕ ಪುತ್ರನ್ ಹೆಬ್ರಿ ಮಾತನಾಡಿ, ಕಳೆದ 15 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ ಜಿಲ್ಲಾಧಿಕಾರಿಗಳು ಈವರೆಗೂ ನಮ್ಮ ಸಮಸ್ಯೆ ಆಲಿಸಿಲ್ಲ. ನಮ್ಮ ಮನವಿ ಸ್ವೀಕರಿಸಲು ಬಂದಿಲ್ಲ. ಹೀಗಾಗಿ ಜಿಲ್ಲಾಡಳಿತ ನಿರ್ಲಕ್ಷ್ಯ ಖಂಡಿಸಿ ಇಂದು ಮೌನ ಪ್ರತಿಭಟನೆ ನಡೆಸುತ್ತಿದ್ದೇವೆ. ಇನ್ನೂ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಬೇರೆ ಬೇರೆ ರೀತಿಯ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.
ನಮ್ಮ ಸಮುದಾಯದಲ್ಲಿ ಸಾಕಷ್ಟು ಮಂದಿ ವಿದ್ಯಾವಂತರು ಇದ್ದಾರೆ. ಆದರೆ ಅವರಲ್ಲಿರುವ ಭಯ ಇನ್ನೂ ಹೋಗಿಲ್ಲ. ಅವರು ಹಿಂಜರಿಕೆ, ಕೀಳರಿಮೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಉನ್ನತ ಉದ್ಯೋಗ ಪಡೆಯಲು ಆಗುತ್ತಿಲ್ಲ. ಮೀಸಲಾತಿ ಪಟ್ಟಿಯಲ್ಲಿ ಬಲಾಢ್ಯ ಸಮುದಾಯಗಳು ಇರುವುದರಿಂದ ಕೊರಗ ಸಮುದಾಯದ ಯುವಕ ಯುವತಿಯರು ಪೈಪೋಟಿ ನೀಡಿ ಒಳ್ಳೆಯ ಸರಕಾರಿ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ಪೌರ ಕಾರ್ಮಿಕ ಹುದ್ದೆಗಳು ಮಾತ್ರ ಸಿಗುತ್ತಿದೆ. ಹೀಗಾಗಿ ಬೇರೆಯ ಉದ್ಯೋಗವನ್ನು ಕೊರಗ ಸಮುದಾಯದವರಿಗೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಎಂಕಾಮ್ ವಿದ್ಯಾರ್ಥಿನಿ ಪ್ರೀತಿ ಮಾತನಾಡಿ, ಕೊರಗ ಸಮುದಾಯದಲ್ಲಿ ಶೇ.50ಕ್ಕಿಂತಲೂ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳು ಸಾಕಷ್ಟು ಮಂದಿ ಇದ್ದಾರೆ. ಆದರೆ ಯಾರಿಗೂ ಸೂಕ್ತ ಉದ್ಯೋಗ ಸಿಗುತ್ತಿಲ್ಲ. ಡಿಸಿ ಕಚೇರಿ, ತಾಪಂ ಕಚೇರಿಗಳಲ್ಲಿಯೂ ನಮ್ಮನ್ನು ಕಡೆಗಣಿಸಲಾಗುತ್ತಿದೆ. ಖಾಸಗಿ ಸಂಸ್ಥೆಗಳಲ್ಲಿಯೂ ಕೊರಗ ಸಮುದಾಯದವರಿಗೆ ಕೆಲಸ ಕೊಡುವುದಿಲ್ಲ. ನಮ್ಮನ್ನು ಕೀಳಾಗಿ ನೋಡುತ್ತಾರೆ. 15 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ನಮ್ಮ ಸಮಸ್ಯೆ ಆಲಿಸಲು ಡಿಸಿ ಬಂದಿಲ್ಲ. ಇದು ಬೇಸರದ ಸಂಗತಿ ಎಂದು ಆಳಲು ತೋಡಿಕೊಂಡರು.
ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ, ಮುಖಂಡರಾದ ಬೊಗ್ರ ಕೊಕ್ಕರ್ಣೆ, ವಿ. ಸಂಜೀವ ಬಾರ್ಕೂರು, ಶೇಖರ ಕೆಂಜೂರು, ದೀಪಾ, ದಿವ್ಯಾ, ದಿವಾಕರ ಕೆಂಜೂರು ಮೊದಲಾದವರು ಉಪಸ್ಥಿತರಿದ್ದರು.