ದುಬೈಗರನ್ನು ಸಂಗೀತದ ಅಲೆಯಲ್ಲಿ ತೇಲಾಡಿಸಲು ಬರುತ್ತಿದ್ದಾರೆ ಗುರುಕಿರಣ್! ಜನವರಿ 25ರಂದು 'ಗುರು ಕಿರಣ್ ನೈಟ್'
ಗುರುಕಿರಣ್ ಜೊತೆ ಮೋಡಿಮಾಡಲಿದ್ದಾರೆ ಹರೀಶ್ ಶೇರಿಗಾರ್, ನವೀದ್ ಮಾಗುಂಡಿ, ಗುಣಶೀಲ್ ಶೆಟ್ಟಿ
ದುಬೈ: ಇಲ್ಲಿನ ಅಲ್ ಖಿಸೆಸ್ಸ್ ಅಮಿಟಿ ಸ್ಕೂಲಿನ ಫುಟ್ಬಾಲ್ ಮೈದಾನದಲ್ಲಿ ಜನವರಿ 25ರಂದು ಕನ್ನಡ ಚಲನಚಿತ್ರ ರಂಗದ ಖ್ಯಾತ ಸಂಗೀತ ನಿರ್ದೇಶಕ ಗುರು ಕಿರಣ್ ತಂಡದಿಂದ 'ಗುರು ಕಿರಣ್ ನೈಟ್' ಅದ್ಧೂರಿ ಸಂಗೀತ ಕಾರ್ಯಕ್ರಮ ನಡೆಯಲಿದೆ..
ಗುರು ಕಿರಣ್ ಅವರ ಸಂಗೀತ ಕಾರ್ಯಕ್ರಮಕ್ಕೆ 40 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಸಲಾಗಿರುವ 'ಗುರು ಕಿರಣ್ ನೈಟ್' ಕಾರ್ಯಕ್ರಮದ ಪ್ರವೇಶ ದ್ವಾರಗಳು ಸಂಜೆ 5 ಗಂಟೆಗೆ ತೆರೆಯಲಿದೆ.
ಸಂಗೀತ ಮತ್ತು ನೃತ್ಯದ ನಾನ್-ಸ್ಟಾಪ್ ನೇರ ಸಂಗೀತ ಕಾರ್ಯಕ್ರಮವು ಸಂಗೀತ ಪ್ರಿಯರನ್ನು ಮಂತ್ರಮುಗ್ಧಗೊಳಿಸಲಿದೆ. ಗುರು ಕಿರಣ್ ಸೇರಿದಂತೆ 14 ಭಾಷೆಗಳಲ್ಲಿ 5000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಪ್ರಸಿದ್ಧ ಹಿನ್ನೆಲೆ ಗಾಯಕಿ ಅನುರಾಧಾ ಭಟ್, 'ಶೇಕ್ ಇಟ್ ಪುಷ್ಪಾವತಿ' ಖ್ಯಾತಿಯ ಐಶ್ವರ್ಯ ರಂಗರಾಜನ್, KGF ಖ್ಯಾತಿಯ ಸಂತೋಷ್ ವೆಂಕಿ, ಜೊತೆಗೆ ಯುಎಇ ಪ್ರತಿಭೆಗಳಾದ ಖ್ಯಾತ ಗಾಯಕರಾದ ಹರೀಶ್ ಶೇರಿಗಾರ್, ನವೀದ್ ಮಾಗುಂಡಿ ಮತ್ತು ಗುಣಶೀಲ್ ಶೆಟ್ಟಿ ತಮ್ಮ ಹಾಡುಗಾರಿಕೆಯ ಮೂಲಕ ಮೋಡಿಮಾಡಲಿದ್ದಾರೆ.
ಕಾರ್ಯಕ್ರಮದ ನಿರೂಪಣೆಯನ್ನು ಖ್ಯಾತ ಟಿವಿ ನಿರೂಪಕ ಅಕುಲ್ ಬಾಲಾಜಿ ನಡೆಸಿಕೊಡಲಿದ್ದಾರೆ. ಬ್ಯಾಂಡ್‌ನಲ್ಲಿ ಆಲ್ವಿನ್ ಫೆರ್ನಾಡೀಸ್ (ಗಿಟಾರ್), ಹರ್ಷವರ್ಧನ್ (ಕೀಬೋರ್ಡ್), ಮಂಜು (ಡ್ರಮ್ಸ್), ಪ್ರಾರ್ಥನಾ (ಬಾಸ್), ಮಧುಸೋಹನ್ ಮತ್ತು ಸುಮುಖ್ (ಪರ್ಕಷನ್-ತಾಳ ವಾದ್ಯ), ಅಭಿಷೇಕ್ (ಫ್ಲೂಟ್ ಮತ್ತು ಸ್ಯಾಕ್ಸೊಫೋನ್) ತಮ್ಮ ಪ್ರತಿಭೆಯನ್ನು ತೋರಿಸಲಿದ್ದಾರೆ. ಈ ಸಂಗೀತ ಕಾರ್ಯಕ್ರಮವನ್ನು ಇನ್ನಷ್ಟು ರಂಗೇರಿಸಲು ಬೆಂಗಳೂರಿನ ನಂ.1 ಡ್ಯಾನ್ಸ್ ಟ್ರೂಪ್ ಆಕ್ಸಿಜನ್ ಅವರ ಅದ್ಭುತ ನೃತ್ಯ ಪ್ರದರ್ಶನವೂ ಇರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.