ಅದಮಾರು ಪೂರ್ಣಪ್ರಜ್ಞಾ ಕಾಲೇಜಿನಲ್ಲಿ 'ಜೀವ ರಕ್ಷಕ' ಜಲಾಲುದ್ದೀನ್ಗೆ ಸನ್ಮಾನ
ಉಚ್ಚಿಲ: ಪಡುಬಿದ್ರೆ, ಉಚ್ಚಿಲ, ಕಾಪು ಸುತ್ತಮುತ್ತ ಸಂಭವಿಸುವ ಅಪಘಾತದ ವೇಳೆ ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳ ಜೀವ ರಕ್ಷಕನೆಂದೇ ಖ್ಯಾತಿ ಪಡೆದಿಯುವ ಉಚ್ಚಿಲದ ಸಾಮಾಜಿಕ ಕಾರ್ಯಕರ್ತ ಜಲಾಲುದ್ದೀನ್ ಜಲ್ಲು ಅವರ ಸೇವೆಯನ್ನು ಗುರುತಿಸಿ ಶುಕ್ರವಾರ ಅದಮಾರು ಪೂರ್ಣಪ್ರಜ್ಞಾ ಶಿಕ್ಷಣ ಸಂಸ್ಥೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ರಾಷ್ಟೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಪ್ರಯುಕ್ತ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ ಅದಮಾರು, ಪ್ರಾಜ್ ಜೆನೆಕ್ಸ್ ಲಿಮಿಟೆಡ್ ಹಾಗೂ ಪಡುಬಿದ್ರಿ ಪೋಲಿಸ್ ಠಾಣೆಯ ಸಹಭಾಗಿತ್ವದಲ್ಲಿ ನಡೆಸಲಾದ 'ರಸ್ತೆ ಸುರಕ್ಷತೆ ಜೀವದ ರಕ್ಷೆ' ಎಂಬ ಕಾರ್ಯಕ್ರಮದ ವೇದಿಕೆಯಲ್ಲಿ ಜಲಾಲುದ್ದೀನ್ ಅವರನ್ನು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕಾಪು ಸರ್ಕಲ್ ಇನ್ಸ್ಪೆಕ್ಟರ್ ಅಝ್ಮತ್ ಅಲಿ ಜಿ., ಪಡುಬಿದ್ರೆ ಠಾಣಾಧಿಕಾರಿ ಶಕ್ತಿವೇಲು, ಪೂರ್ಣಪ್ರಜ್ಞ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶ್ರೀಕಾಂತ್ ರಾವ್, ಎಎಸೈ ರಾಜೇಶ್ ಪಿ. ಮತ್ತಿತರರು ಹಾಜರಿದ್ದರು.
ಹಗಲು, ರಾತ್ರಿ ಎನ್ನದೆ ಯಾವುದೇ ಸ್ವಾರ್ಥಕತೆಯನ್ನು ಬಯಸದೇ, ಸದಾ ಸಮಯ ಜೀವರಕ್ಷಕರಾಗಿ ಸಮಾಜಕ್ಕೆ ತಮ್ಮಿಂದಾಗುವ ಸೇವೆ ಸಲ್ಲಿಸುವ ಮೂಲಕ ಮಾದರಿ ಸಮಾಜ ಸೇವಕನಾಗಿರುವ ಜಲಾಲುದ್ದೀನ್ ಅವರು, ಅಪಘಾತದಲ್ಲಿ ಗಾಯಗೊಳ್ಳುವ ಗಾಯಾಳುಗಳ ರಕ್ಷಣೆಯ ಜೊತೆಗೆ ತುರ್ತಾಗಿ ರಕ್ತದ ಅವಶ್ಯಕತೆ ಇರುವವರಿಗೆ ರಕ್ತದಾನದ ವ್ಯವಸ್ಥೆಯನ್ನು ಮಾಡುವ ಮೂಲಕ ಜೀವ ರಕ್ಷಕರಾಗಿ ಪರಿಚಿತರಾಗಿದ್ದಾರೆ. ಇವರ ಸಾಮಾಜಿಕ ಬದ್ಧತೆ, ಮಾವನೀಯ ಕಳಕಳಿಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿ, ಗೌರವಿಸಿದೆ.
