ದೆಂದೂರುಕಟ್ಟೆ: 'ಸಾದ್ವಿ ಮಾಧ್ವಿ ಪಾಠಶಾಲಾ' ವಸತಿ ಶಾಲೆಯ ಭೂಮಿಪೂಜೆ ಮಾಡಿದ  ಪಲಿಮಾರು ಶ್ರೀ

ದೆಂದೂರುಕಟ್ಟೆ: 'ಸಾದ್ವಿ ಮಾಧ್ವಿ ಪಾಠಶಾಲಾ' ವಸತಿ ಶಾಲೆಯ ಭೂಮಿಪೂಜೆ ಮಾಡಿದ ಪಲಿಮಾರು ಶ್ರೀ

ಉಡುಪಿ: ಪಲಿಮಾರು ಮಠದ ಯೋಗ ದೀಪಿಕಾ ಆಶ್ರಯದಲ್ಲಿ ದೆಂದೂರುಕಟ್ಟೆಯಲ್ಲಿ ನಿರ್ಮಾಣವಾಗಲಿರುವ 'ಸಾದ್ವಿ ಮಾಧ್ವಿ ಪಾಠಶಾಲಾ' ವಸತಿ ಶಾಲೆಯ ಭೂಮಿಪೂಜೆಯನ್ನು ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ನೆರವೇರಿಸಿದರು.

ಬಳಿಕ ಮಾತನಾಡಿದ ಪಲಿಮಾರು ಶ್ರೀಪಾದರು, ಒಂದು ಹೆಣ್ಣು ಸುಶಿಕ್ಷಿತಳಾದರೆ ಇಡೀ ಸಮಾಜ ಸುಸಂಸ್ಕೃತವಾಗುತ್ತದೆ. ಹಾಗಾಗಿ ಹೆಣ್ಣುಮಕ್ಕಳನ್ನು ಸುಸಂಸ್ಕೃತವಾಗಿಸಬೇಕು. ಸಮಾಜದಲ್ಲಿ ಇಂದು ಬೇಕಾದಷ್ಟು ಧರ್ಮಾತೀತ ಶಾಲಾ ಸಂಸ್ಥೆಗಳಿವೆ. ಆದರೆ, ಧರ್ಮಾನ್ವಿತ ಶಾಲೆಗಳ ಸಂಖ್ಯೆ ಕಡಿಮೆ ಇದೆ. ಹಾಗಾಗಿ ನಾವು ಅಂಥ ಶಾಲೆಗಳನ್ನು ನಿರ್ಮಿಸಿ ಸನಾತನ ಸಂಸ್ಕೃತಿ ಪಸರಿಸುವ ಕೆಲಸ ಮಾಡಬೇಕಿದೆ ಎಂದರು.

ಎಲ್ಲಿ ಧರ್ಮವಿರುತ್ತದೆಯೋ ಅಲ್ಲಿ ದೇವರು ಇರುತ್ತಾನೆ. ದೇವರು ಇದ್ದಲ್ಲಿ ಎಲ್ಲಾ ಉತ್ತಮ ಕಾರ್ಯಗಳು ಸಾಕಾರಗೊಳ್ಳುತ್ತವೆ. ಅಂಥ ಧರ್ಮ ಪ್ರಜ್ಞೆಯನ್ನು ಜಾಗೃತಗೊಳಿಸಬೇಕು. ಇಂದಿನ ಹಲವಾರು ವಿದ್ಯಮಾನಗಳು ಸನಾತನ ಸಂಸ್ಕೃತಿಗೆ ವಿರುದ್ಧವಾಗಿ ನಡೆಯುತ್ತಿದೆ. ಆದರೆ, ಅದನ್ನು ಸವಾಲಾಗಿ ಸ್ವೀಕರಿಸಿ ಸನಾತನ ಸಂಸ್ಕೃತಿ ಉಳಿಸಲು ವಿರೋಧಕ್ಕೆ ವಿರುದ್ಧವಾಗಿ ಈಜಬೇಕಿದೆ ಎಂದು ಶ್ರೀಪಾದರು ಕರೆ ನೀಡಿದರು.

ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಕರ್ಣಾಟಕ ಬ್ಯಾಂಕ್‌ ಅಧ್ಯಕ್ಷ ರಾಘವೇಂದ್ರ ಭಟ್ ಎಂ., ಮುಂಬೈ ಟಿಸಿಎಸ್ ಐಯಾನ್ ಗ್ಲೋಬಲ್ ಹೆಡ್ ವೆಂಗುಸ್ವಾಮಿ ರಾಮಸ್ವಾಮಿ, ಅದಾನಿ ಗ್ರೂಪ್ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಕಿಶೋ‌ರ್ ಆಳ್ವ, ಬೆಂಗಳೂರು ಕಾಂಗ್ರೆಸ್ ಮುಂದಾಳು ಬಾಲಾಜಿ ಅಭ್ಯಾಗತರಾಗಿ ಆಗಮಿಸಿ, ಶ್ರೀಗಳ ಕಾರ್ಯವನ್ನು ಪ್ರಶಂಸಿಸಿ ಸಹಕಾರದ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಳದಾನಿ ವೇದವ್ಯಾಸ ಉಪಾಧ್ಯಾಯ ಹಾಗೂ ಸಾದ್ವಿ ಮಾಧ್ವ ಸಂಸ್ಥೆ ಕಾರ್ಯದರ್ಶಿ ಶ್ರೀಶ ಭಟ್ ಕಡೆಕಾರು ಅವರನ್ನು ಶ್ರೀಗಳು ಗೌರವಿಸಿದರು.

ಪಲಿಮಾರು ಮಠದ ಆಡಳಿತಾಧಿಕಾರಿ ಪ್ರಹ್ಲಾದ ರಾವ್ ನಿರೂಪಿಸಿ, ವಂದಿಸಿದರು. ವಿದ್ಯಾರ್ಥಿನಿ ವೈಷ್ಣವಿ ಹೆಬ್ಬಾರ್ ಸ್ವಾಗತಿಸಿದರು.

Ads on article

Advertise in articles 1

advertising articles 2

Advertise under the article