ಭಾರತದ ಮೇಲೆ ಶೇ.500ರಷ್ಟು ಭಾರೀ ಸುಂಕ ಶಿಕ್ಷೆ!  ಮಸೂದೆಗೆ ಟ್ರಂಪ್‌ ಗ್ರೀನ್ ಸಿಗ್ನಲ್

ಭಾರತದ ಮೇಲೆ ಶೇ.500ರಷ್ಟು ಭಾರೀ ಸುಂಕ ಶಿಕ್ಷೆ! ಮಸೂದೆಗೆ ಟ್ರಂಪ್‌ ಗ್ರೀನ್ ಸಿಗ್ನಲ್

ವಾಷಿಂಗ್ಟನ್‌: ಭಾರತದ (India) ಮೇಲೆ 500% ಸುಂಕ ವಿಧಿಸಲು ಅಧಿಕಾರ ನೀಡುವ ಮಸೂದೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅನುಮತಿ ನೀಡಿದ್ದಾರೆ.

ಈ ಮಸೂದೆ ಸೆನೆಟ್‌ನಲ್ಲಿ ಅಂಗೀಕಾರವಾದರೆ ಆದರೆ ರಷ್ಯಾದ ತೈಲ ಅಥವಾ ಯುರೇನಿಯಂ ಅನ್ನು ಉದ್ದೇಶಪೂರ್ವಕವಾಗಿ ಖರೀದಿಸುವ ರಾಷ್ಟ್ರಗಳ ಮೇಲೆ 500% ರಷ್ಟು ಸುಂಕವನ್ನು ವಿಧಿಸಲು ಅಮೆರಿಕ ಅಧ್ಯಕ್ಷರಿಗೆ ಅಧಿಕಾರ ನೀಡುತ್ತದೆ.

ರಷ್ಯಾವನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಈ ಮಸೂದೆಯನ್ನು ಅಮೆರಿಕ ಸಿದ್ಧಪಡಿಸಿದೆ. ಮಸೂದೆ ಅಂಗೀಕಾರವಾಗದರೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಭಾರತ, ಚೀನಾ, ಬ್ರೆಜಿಲ್‌ ಮೇಲೆ ಅಮೆರಿಕ ಭಾರೀ ಪ್ರಮಾಣದ ತೆರಿಗೆ ವಿಧಿಸುವ ಸಾಧ್ಯತೆಯಿದೆ.

ರಿಪಬ್ಲಿಕನ್‌ ಪಕ್ಷದ ಸೆನೆಟರ್‌ ಗ್ರಹಾಂ ಬಿಲ್‌ ಈ ಮಸೂದೆಯ ಬಗ್ಗೆ ಟ್ರಂಪ್‌ ಜೊತೆ ಸಭೆ ನಡೆಸಿದ್ದಾರೆ. ಸಭೆಯ ಬಳಿಕ ಪೋಸ್ಟ್‌ ಮಾಡಿದ ಅವರು, ವಿವಿಧ ವಿಷಯಗಳ ಕುರಿತು ಟ್ರಂಪ್ ಅವರೊಂದಿಗೆ ಸಭೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ದ್ವಿಪಕ್ಷೀಯ ರಷ್ಯಾ ನಿರ್ಬಂಧ ಮಸೂದೆ ಮಂಡಿಸಲು ಅವರು ಹಸಿರು ನಿಶಾನೆ ನೀಡಿದ್ದಾರೆ ಎಂದು ಹೇಳಿದರು.  

ಈ ಮಸೂದೆಯು ಚೀನಾ, ಭಾರತ ಮತ್ತು ಬ್ರೆಜಿಲ್‌ನಂತಹ ದೇಶಗಳ ವಿರುದ್ಧ ಅಧ್ಯಕ್ಷ ಟ್ರಂಪ್‌ಗೆ ಭಾರೀ ಪ್ರಮಾಣದ ತೆರಿಗೆ ವಿಧಿಸಲು ಅನುಮತಿ ನೀಡುತ್ತದೆ. ತೈಲವನ್ನು ಖರೀದಿಸುವ ಮೂಲಕ ಉಕ್ರೇನ್ ವಿರುದ್ಧದ ಪುಟಿನ್ ರಕ್ತಪಾತಕ್ಕೆ ಹಣಕಾಸು ಒದಗಿಸುತ್ತದೆ. ಮುಂದಿನ ವಾರದ ಆರಂಭದಲ್ಲಿ ನಡೆಯುತ್ತಿರುವ ಮತದಾನಕ್ಕೆ ನಾನು ಎದುರು ನೋಡುತ್ತಿದ್ದೇನೆ ಎಂದು ಗ್ರಹಾಂ ಬಿಲ್‌ ಬರೆದುಕೊಂಡಿದ್ದಾರೆ.

ಅಧಿಕಾರಕ್ಕೆ ಬರುವ ಮೊದಲೇ ಟ್ರಂಪ್‌ ಅವರು ರಷ್ಯಾ ಉಕ್ರೇನ್‌ ಯುದ್ಧವನ್ನು ನಿಲ್ಲಿಸುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಹಲವು ಸುತ್ತಿನ ಮಾತುಕತೆ ನಡೆದರೂ ಯುದ್ಧ ಮಾತ್ರ ನಿಲ್ಲುತ್ತಿಲ್ಲ. ಈಗ ಯುದ್ಧ ನಿಲ್ಲಿಸಲು ಟ್ರಂಪ್‌ ರಷ್ಯಾ ಮಿತ್ರ ದೇಶಗಳ ಮೇಲೆ ತೆರಿಗೆ ಬೆದರಿಕೆ ಹಾಕಲು ಮುಂದಾಗಿದ್ದಾರೆ. 

ಟ್ರಂಪ್‌ ಅಧಿಕಾರಕ್ಕೆ ಏರಿದ ಆರಂಭದಲ್ಲಿ ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ 25% ಸುಂಕ ವಿಧಿಸಿದ್ದರು. ಬಳಿಕ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ಪ್ರತಿಯಾಗಿ 25% ದಂಡದ ರೂಪದಲ್ಲಿ ಸುಂಕ ಹೇರಿದ್ದಾರೆ. ಈ ನಿರ್ಧಾರದಿಂದ ಭಾರತದ ಕೆಲವು ವಸ್ತುಗಳಿಗೆ ಈಗ 50% ಸುಂಕ ಹೇರಲಾಗಿದೆ.  

ಭಾರತ ಮತ್ತು ಅಮೆರಿಕದ ಮಧ್ಯೆ ವ್ಯಾಪಾರ ಒಪ್ಪಂದ ಮಾತುಕತೆ ನಡೆಯುತ್ತಿದ್ದರೂ ಇಲ್ಲಿಯವರಗೆ ಯಾವುದೇ ಸಹಿ ಬಿದ್ದಿಲ್ಲ. ಅಮೆರಿಕ ಡೈರಿ ಮತ್ತು ಕೃಷಿ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ಅನುಮತಿ ನೀಡಬೇಕೆಂದು ಬೇಡಿಕೆ ಇರಿಸಿದೆ. ಆದರೆ ಕೇಂದ್ರ ಸರ್ಕಾರ ಈ ಬೇಡಿಕೆಗೆ ಒಪ್ಪಿಗೆ ನೀಡದ ಕಾರಣ ಮಾತುಕತೆ ನಡೆಯುತ್ತಲೇ ಇದೆ.

Ads on article

Advertise in articles 1

advertising articles 2

Advertise under the article