
ಕ್ಲೀನ್ ಚಿಟ್ ಸಿಕ್ಕಿದ್ದರೂ ಏಕೆ ಇನ್ನೂ ನನ್ನನ್ನು ಸಂಪುಟಕ್ಕೆ ಸೇರಿಸಿಕೊಂಡಿಲ್ಲ: ಬೊಮ್ಮಾಯಿ ವಿರುದ್ಧ ಈಶ್ವರಪ್ಪ ಗರಂ
ಬಾಗಲಕೋಟೆ(Headlines Kannada): ನನ್ನ ವಿರುದ್ಧದ ಕಮಿಷನ್ ಪಡೆದ ಆರೋಪ ಪ್ರಕರಣ ಸಂಬಂಧ ಪೊಲೀಸ್ ತನಿಖೆಯಲ್ಲಿ ಕ್ಲೀನ್ ಚಿಟ್ ಸಿಕ್ಕಿದ್ದರೂ ಮತ್ತೆ ಏಕೆ ನನ್ನನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಿಲ್ಲ ಎಂದು ಮಾಜಿ ಸಚಿವ ಈಶ್ವರಪ್ಪ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯನ್ನು ಪ್ರಶ್ನಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಮುಖ್ಯಮಂತ್ರಿ ವಿರುದ್ಧ ಅ#ಸಮಾಧಾನ ಹೊರಹಾಕಿದ್ದಾರೆ. ನನಗೆ ಕ್ಲೀನ್ ಚಿಟ್ ಸಿಕ್ಕಿದ ಮೇಲೆ ಇಡೀ ರಾಜ್ಯದ ಜನ ಪ್ರಶ್ನೆ ಮಾಡುತ್ತಿದ್ದು, ಇದಕ್ಕೆ ನನಗೆ ಉತ್ತರ ಕೊಡಲು ಆಗುತ್ತಿಲ್ಲ, ಮುಖ್ಯಮಂತ್ರಿಯವರೇ ಉತ್ತರಿಸಬೇಕು ಎಂದು ಹೇಳಿದರು.
ನನ್ನನ್ನು ಯಾಕೆ ಸಂಪುಟಕ್ಕೆ ತೆಗೆದುಕೊಂಡಿಲ್ಲ ಎಂದು ಮಾದ್ಯಮದ ಮೂಲಕ ನಾನು ಮುಖ್ಯಮಂತ್ರಿಯವರಿಗೆ ಕೇಳುತ್ತೇನೆ. ಈ ಬಗ್ಗೆ ನೀವು ರಾಜ್ಯದ ಜನತೆಗೆ ಉತ್ತರ ಕೊಡಿ. ಇದು ಕೇಂದ್ರ ನಾಯಕರ ತೀರ್ಮಾನ ಎಂದು ಅವರು ಹೇಳಬಹುದು. ಆದರೆ ಇದು ನನಗೆ ಗೊತ್ತಿಲ್ಲ. ಯಾಕೆಂದರೆ ಮುಖ್ಯಮಂತ್ರಿಯವರಿಗೆ ತಮ್ಮ ಸಂಪುಟದಲ್ಲಿ ಯಾರು ಯಾರು ಮಂತ್ರಿಗಳನ್ನು ಇಟ್ಟುಕೊಳ್ಳಬೇಕು ಎಂಬ ಅಧಿಕಾರ ಇರುತ್ತದೆ ಎಂದು ಈಶ್ವರಪ್ಪ ಅವರು ಬೊಮ್ಮಾಯಿ ವಿರುದ್ಧ ಅಸಮಾಧಾನ ಹೊರಹಾಕಿದರು.