ಗಂಗಾವತಿಯ ದರ್ಗಾ ಅಭಿವೃದ್ಧಿಗೆ 6 ಕೋಟಿ ರೂ. ದೇಣಿಗೆ ನೀಡಿದ ಜನಾರ್ದನ ರೆಡ್ಡಿ; ದರ್ಗಾ ಸೇರಿದಂತೆ ವಿವಿಧ ಮಸೀದಿಗಳಿಗೆ ಭೇಟಿ
ಕೊಪ್ಪಳ(Headlines Kannada): ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ರಾಜಕಾರಣಕ್ಕೆ ರೀ ಎಂಟ್ರಿ ಕೊಡಲು ಮುಂದಾಗಿದ್ದು, ಗಂಗಾವತಿಯಲ್ಲಿ ಫುಲ್ ಪ್ರಚಾರಕ್ಕಿಳಿದಿದ್ದಾರೆ. ಗುರುವಾರ ದೇವಸ್ಥಾನದ ಜೊತೆಗೆ ದರ್ಗಾಕ್ಕೂ ಭೇಟಿ ನೀಡುವ ಮೂಲಕ ಜನಾರ್ದನ ರೆಡ್ಡಿ ಬಿಜೆಪಿಯ ಜೊತೆ ಗಂಗಾವತಿಯ ಕಾಂಗ್ರೆಸ್ ಪಾಳೆಯದಲ್ಲೂ ನಡುಕ ಸೃಷ್ಟಿಸಿದ್ದಾರೆ.
ಗುರುವಾರ ಜನಾರ್ದನ ರೆಡ್ಡಿ ಗಂಗಾವತಿಯ ಖಲಿಲುಲ್ಲಾ ಖಾದ್ರಿ ದರ್ಗಾ ಅಭಿವೃದ್ಧಿಗೆ 6 ಕೋಟಿ ರೂ. ದೇಣಿಗೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಮೂಲಕ ಅವರು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ವೋಟ್ ಬ್ಯಾಂಕ್ಗೆ ಕೈ ಹಾಕಿದ್ದಾರೆ.
ದರ್ಗಾದಲ್ಲೇ 6 ಕೋಟಿ ರೂ. ವೆಚ್ಚದ ಒಪ್ಪಂದವೊಂದಕ್ಕೆ ಸಹಿ ಮಾಡಿರುವ ಜನಾರ್ದನ ರೆಡ್ಡಿ, ಬೆಳಗಾವಿ ಮೂಲದ ಸ್ಟುಡಿಯೋ ಅಮೀರ್ ಕಂಪನಿಗೆ ಈ ದರ್ಗಾ ಅಭಿವೃದ್ಧಿ ಜವಾಬ್ದಾರಿಯನ್ನು ನೀಡಿದ್ದಾರೆ. ನೇರವಾಗಿ ಕಂಪನಿಗೆ ಹಣ ನೀಡುವುದಾಗಿ ಜನಾರ್ದನ ರೆಡ್ಡಿ ಸಹಿ ಮಾಡಿದ್ದಾರೆ. ಇದರಿಂದ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಗಲಿಬಿಲಿ ಗೊಂಡಿದ್ದಾರೆ.
ಗಂಗಾವತಿಯ ಕರ್ನೂಲ್ ಬಾಬಾ ದರ್ಗಾ ಸೇರಿ ವಿವಿಧ ಮಸೀದಿಗೆ ಭೇಟಿ ನೀಡಿದ ಜನಾರ್ದನ ರೆಡ್ಡಿ. ಜೊತೆಗೆ ಮುಸ್ಲಿಂ ಮುಖಂಡರೊಬ್ಬರ ಗೃಹ ಪ್ರವೇಶದಲ್ಲಿ ಭಾಗವಹಿಸಿದರು. ತನ್ನ ರಾಜಕೀಯ ಕುರಿತ ಎಲ್ಲ ಪ್ರಶ್ನೆಗಳಿಗೂ ಡಿಸೆಂಬರ್ 25 ರಂದು ಉತ್ತರಿಸುತ್ತೇನೆ ಎಂದಿರುವ ಅವರು, ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಪರೋಕ್ಷವಾಗಿ ಸೂಚನೆ ನೀಡಿದ್ದಾರೆ.