
ವಾಯುಪಡೆಯ ಯುದ್ಧ ವಿಮಾನದ ಪೈಲಟ್ ಆದ ದೇಶದ ಮೊದಲ ಮುಸ್ಲಿಂ ಮಹಿಳೆ; ಇತಿಹಾಸ ನಿರ್ಮಿಸಲು ಮುಂದಾಗಿರುವ ಸಾನಿಯಾ ಮಿರ್ಜಾ
Friday, December 23, 2022
ಮಿರ್ಜಾಪುರ(Headlines Kannada): ಉತ್ತರ ಪ್ರದೇಶದ ಮಿರ್ಜಾಪುರದ ಟಿವಿ ಮೆಕಾನಿಕ್ ಒಬ್ಬರ ಪುತ್ರಿ ಸಾನಿಯಾ ಮಿರ್ಜಾ ಎನ್ನುವ ಯುವತಿ, ಭಾರತೀಯ ವಾಯುಸೇನೆಯ ಫೈಟರ್ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಭಾರತೀಯ ವಾಯುಸೇನೆಯಲ್ಲಿ ಪೈಲಟ್ ಆಗಿ ಆಯ್ಕೆಯಾದ ಮೊದಲ ಮುಸ್ಲಿಂ ಮಹಿಳೆ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.
ಮಿರ್ಜಾಪುರದ ಜಸೋವರ್ ನಿವಾಸಿಯಾಗಿರುವ ಸಾನಿಯಾ ಮಿರ್ಜಾ ಅವರ ತಂದೆ ಟಿವಿ ಮೆಕ್ಯಾನಿಕ್ ಆಗಿದ್ದು, ಬಡತನದಲ್ಲಿ ಬೆಳೆದ ಯುವತಿಯ ಈ ಸಾಧನೆಯನ್ನು ದೇಶಾದ್ಯಂತ ಜನ ಕೊಂಡಾಡುತ್ತಿದ್ದಾರೆ. ಜೊತೆಗೆ ಅವರ ಊರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.ಹಿಂದಿ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿರುವ ಸಾನಿಯಾ ಮಿರ್ಜಾ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಇದೀಗ ವಾಯುಪಡೆಯ ಪೈಲಟ್ ತರಬೇತಿಗೆ ಆಯ್ಕೆಯಾಗಿದ್ದಾರೆ. ಡಿ.27 ರಂದು ಪುಣೆಯ NDA ಖಡಕ್‌ವಾಸ್ಲಾಕ್ಕೆ ಸೇರಲಿದ್ದಾರೆ. ಅಲ್ಲಿ ಅವರಿಗೆ ಪೈಲಟ್ ತರಬೇತಿ ಕಾರ್ಯ ನಡೆಯಲಿದೆ.
ತನ್ನ ಈ ಬಹು ದೊಡ್ಡ ಸಾಧನೆಯನ್ನು ಸಾನಿಯಾ ಮಿರ್ಜಾ, ತಂದೆ-ತಾಯಿಗೆ ಅರ್ಪಿಸಿದ್ದು, 2022ರ ND ಪರೀಕ್ಷೆಯಲ್ಲಿ, ಫೈಟರ್ ಪೈಲಟ್ ವಿಭಾಗದಲ್ಲಿ ಮಹಿಳೆಯರಿಗೆ ಕೇವಲ 2 ಸ್ಥಾನ ಮಾತ್ರ ಇತ್ತು. 2ನೇ ಪ್ರಯತ್ನದಲ್ಲಿ ತಾನು ತೇರ್ಗಡೆಯಾಗಿರುವುದಾಗಿ ಹೇಳಿದ್ದಾರೆ.