
2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುದು ನಮ್ಮ ಗುರಿ: ಮೋದಿ
Friday, December 9, 2022
ನವದೆಹಲಿ(Headlines Kannada): ಗುಜರಾತ್‌ನಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ಸಿಕ್ಕಿರುವುದಕ್ಕೆ ಮೋದಿ-ಅಮಿತ್ ಶಾ ಸಂತಸ ಹಂಚಿಕೊಂಡಿದ್ದು, ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ.
ಗುಜರಾತಿನ ಒಟ್ಟು 182 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 156 ಕ್ಷೇತ್ರಗಳಲ್ಲಿ ಗೆದ್ದು ಬೀಗಿದೆ. ಈ ಗೆಲುವಿನ ಹುಮ್ಮಸ್ಸಿನಲ್ಲಿ ಗುರುವಾರ ಸಾಯಂಕಾಲ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ ಎಂದಿದ್ದಾರೆ.
ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ನೋಡಲು ದೇಶದ ಜನ ಹಂಬಲಿಸುತ್ತಾರೆ ಎಂಬುದನ್ನು ಗುಜರಾತ್ ಚುನಾವಣಾ ಫಲಿತಾಂಶ ಮತ್ತೆ ಸಾಬೀತುಪಡಿಸಿದೆ ಎಂದು ಹೇಳಿದರು.
ಬಿಜೆಪಿ ತೆಗೆದುಕೊಳ್ಳುವ ದಿಟ್ಟ ಹಾಗೂ ಕಠಿಣ ನಿರ್ಧಾರದಿಂದಾಗಿ ಈ ದೇಶದ ಜನರು ಬಿಜೆಪಿಯನ್ನು ಇನ್ನಷ್ಟು ಪ್ರೀತಿಸುತ್ತಾರೆ. ಇದರಿಂದಲೇ ಬಿಜೆಪಿಗೆ ಮತ್ತೆ ಮತ್ತೆ ಬೆಂಬಲ ಹಾಗೂ ನಂಬಿಕೆ ಎರಡು ಹೆಚ್ಚಾಗುತ್ತಿದೆ ಎಂದ ಅವರು, ಗುಜರಾತ್‌ನಲ್ಲಿ 25 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಗುಜರಾತ್‌ನ ಜನರು ಬಿಜೆಪಿ ಮೇಲೆ ಇಟ್ಟಿರುವ ನಂಬಿಕೆಯನ್ನು ಹಾಗೇ ಉಳಿಸಿಕೊಂಡು ಬಂದಿದ್ದಾರೆ ಎಂದರು.