ಹೆಜಮಾಡಿಯಲ್ಲಿ ಹೆಚ್ಚುವರಿ ಸುಂಕ ವಸೂಲಾತಿಗೆ ಶಾಶ್ವತ ತಡೆ ನೀಡದಿದ್ದರೆ ಎಂಪಿ, ಎಂಎಲ್ಎ ಅರಬ್ಬೀ ಸಮುದ್ರ ಪಾಲಾಗುವುದರಲ್ಲಿ ಅನುಮಾನವಿಲ್ಲ: ಮುನೀರ್ ಕಾಟಿಪಳ್ಳ ಗು#ಡುಗು
ಹೆಜಮಾಡಿಯಲ್ಲಿ ಹೆಚ್ಚುವರಿ ಟೋಲ್ ಸಂಗ್ರಹದ ಶಾಶ್ವತ ವಾಪಾಸಾತಿ ಆದೇಶಕ್ಕೆ ಆಗ್ರಹಿಸಿ ಸಾಮೂಹಿಕ ಧರಣಿ
ಉಡುಪಿ(Headlines Kannada): ಹೆಜಮಾಡಿಯಲ್ಲಿ ಸುರತ್ಕಲ್ ಟೋಲ್ ಸಂಗ್ರಹಕ್ಕೆ ಶಾಶ್ವತವಾದ ತಡೆ ನೀಡಬೇಕು, ಸುರತ್ಕಲ್ ಮುಕ್ಕಾದಿಂದ ನಂತೂರುವರೆಗಿನ ಹೆದ್ದಾರಿಯನ್ನು ಟೋಲ್ ಮುಕ್ತ ರಸ್ತೆಯೆಂದು ಘೋಷಣೆ ಮಾಡಲು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಮುಂದಾಗಬೇಕು. ಈ ಕೆಲಸವನ್ನು ಮಾಡದೆ, ಬೇರೆ ಬೇರೆ ವಿಧಾನದಲ್ಲಿ ಟೋಲ್ ಸಂಗ್ರಹಕ್ಕೆ ಪ್ರಯತ್ನಿಸಿದರೆ ಹೋರಾಟ ದೊಡ್ಡ ಮಟ್ಟದಲ್ಲಿ ಭುಗಿಲೆಳುತ್ತದೆ. ಸುರತ್ಕಲ್ ನಲ್ಲಿ ಮಾಡಿದ ಹೋರಾಟವೂ ಹೆಜಮಾಡಿಯಲ್ಲಿ ಪುನರಾರ್ವತನೆ ಆಗುತ್ತದೆ. ಸುರತ್ಕಲ್ ಕ್ಕಿಂತ ಹತ್ತುಪಟ್ಟು ದೊಡ್ಡ ರೀತಿಯ ಹೋರಾಟ ಆಗುತ್ತದೆ. ಟೋಲ್ ರೀತಿಯಲ್ಲಿ ನೀವು ಕೂಡ ಅರಬ್ಬೀ ಸಮುದ್ರ ಪಾಲಾಗುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಎಚ್ಚರಿಕೆ ನೀಡಿದರು.
ಹೆಜಮಾಡಿಯಲ್ಲಿ ಹೆಚ್ಚುವರಿ ಟೋಲ್ ಸಂಗ್ರಹದ ಶಾಶ್ವತ ವಾಪಾಸಾತಿ ಆದೇಶಕ್ಕೆ ಆಗ್ರಹಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಹಾಗೂ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಉಡುಪಿ ಬನ್ನಂಜೆಯ ತಾಲೂಕು ಕಚೇರಿ ಬಳಿ ಗುರುವಾರ ಹಮ್ಮಿಕೊಂಡ ಸಾಮೂಹಿಕ ಧರಣಿ ಉದ್ದೇಶಿಸಿ ಮಾತನಾಡಿದರು.
ಬಿಜೆಪಿಯ ಡಬ್ಬ ಇಂಜಿನ್ ಸರಕಾರದಲ್ಲಿ ಯಾವುದು ಬೇಕಾದರೂ ನಡೆದ್ರು, ಅದರಲ್ಲಿ ಅಚ್ಚರಿಯಿಲ್ಲ. ಇಲ್ಲಿಯ ಕ್ರಿ#ಮಿನಲ್ ಗ್ಯಾಂ#ಗ್ ಕೂಡ ಡಬ್ಬ ಹಿಡಿದು ಸುಂಕ ವಸೂಲಿಗೆ ನಿಲ್ಲಬಹುದು. ಡಬ್ಬ ಸರಕಾರದ ಡಬ್ಬಯಿಟ್ಟು ಕಲೆಕ್ಷನ್ ಕೂಡ ಮಾಡಬಹುದು. ಆದರೆ, ನಮ್ಮ ಹೋರಾಟ ಬಿಜೆಪಿ ಸರಕಾರಕ್ಕೆ ಸ್ಪಷ್ಟ ಎಚ್ಚರಿಕೆಯಾಗಿದೆ ಎಂದರು.
ಸುರತ್ಕಲ್ ನ ಮುಕ್ಕಾದಿಂದ ಬಿ.ಸಿ. ರೋಡ್ ನ ವರೆಗಿನ ರಸ್ತೆಗೆ ಬ್ರಹ್ಮಾರಕೂಟ್ಲುವಿನಲ್ಲಿ ಮತ್ತೊಂದು ಟೋಲ್ ಗೇಟ್ ಇದೆ. ಆ ಟೋಲ್ ನಲ್ಲಿ ಗುತ್ತಿಗೆದಾರರು ಪ್ರತಿದಿನ 5 ಲಕ್ಷ ಸಂಗ್ರಹ ಮಾಡಿ ಹೆದ್ದಾರಿ ಪ್ರಾಧಿಕಾರಕ್ಕೆ ನೀಡುತ್ತಿದ್ದಾರೆ. ಒಂದು ವರ್ಷಕ್ಕೆ 18 ಕೋಟಿ ರೂ. ಹಣ ಸಂಗ್ರಹ ಮಾಡಲಾಗುತ್ತದೆ. ಆ 18 ಕೋಟಿ ರೂಪಾಯಿಗಳಲ್ಲಿ ಅದೇ ರಸ್ತೆಯ ಬಾಕಿ ಉಳಿಕೆಯನ್ನು ಭರ್ತಿ ಮಾಡಲು ಅವಕಾಶವಿದೆ. ಆ ಪ್ರಸ್ತಾಪವನ್ನು ಚರ್ಚೆ ಮಾಡಲು ನಮ್ಮ ಜನಪ್ರತಿನಿಧಿಗಳು ಮುಂದೆ ಬರಲಿಲ್ಲ. ಅದೆಲ್ಲದೆ ನವಮಂಗಳೂರು ಬಂದರಿಗೆ ಸಂಪರ್ಕಿಸುವ ರಸ್ತೆಗೆ ಶೇ.25ರಷ್ಟು ಹಣವನ್ನು ನವಮಂಗಳೂರು ಬಂದರುಹಾಕಿದೆ.
ಎಂಆರ್ ಪಿಎಲ್ ನಂತಹ ದೊಡ್ಡ ದೊಡ್ಡ ಕೈಗಾರಿಕೆಗಳನ್ನು ಸೇರಿಸಿಕೊಂಡು 60ರಿಂದ 70 ಕೋಟಿ ಸಂಗ್ರಹಿಸಿ ಆ ರಸ್ತೆಯನ್ನು ಟೋಲ್ ಮುಕ್ತ ರಸ್ತೆಯನ್ನಾಗಿ ಮಾಡುವುದು ಅಸಾಧ್ಯವಾಗಿರಲಿಲ್ಲ. ಆದರೆ ಆ ಸಭೆಯಲ್ಲಿ ನಮ್ಮ ಜಿಲ್ಲೆಯ ಸಂಸದರು, ಸಚಿವರು, ಶಾಸಕರು ಹಾಜರಿರಲಿಲ್ಲ ಎಂಬುವುದು ನಮ್ಮ ದುರಂತ.
ಸುರತ್ಕಲ್ ಟೋಲ್ ಅನ್ನು ವಿಲೀನಗೊಳಿಸಿ ಹೆಜಮಾಡಿ ಟೋಲ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಸುಂಕ ಸಂಗ್ರಹಿಸಲು ಹೋದರೆ ಸಮಸ್ಯೆ ಆಗುತ್ತದೆ. ಹಾಗಾಗಿ ಉಳಿಕೆಯಾಗಿರುವ 60ಕೋಟಿಯನ್ನು ರಾಜ್ಯ ಸರಕಾರ ಭರಿಸುತ್ತದೆ. ಅಲ್ಲದೆ, ಸರಕಾರ, ಬಂದರು ಹಾಗೂ ಪ್ರಾಧಿಕಾರಿಗಳು ಹಂಚಿಕೊಂಡು ಹಣ ಭರಿಸುತ್ತೇವೆ ಎಂಬ ಪ್ರಸ್ತಾಪವನ್ನು ಮುಂದಿಡಬಹುದಿತ್ತು. ಆದರೆ ಇದ್ಯಾವುದೇ ಪ್ರಸ್ತಾಪವನ್ನು ಮುಂದಿಡದೆ, ಸುರತ್ಕಲ್ ಟೋಲ್ ನಲ್ಲಿ ಬರುತ್ತಿದ್ದ ಸುಂಕ ನಮಗೆ ಬರಲೇ ಬೇಕು ಎಂಬ ಉದ್ದೇಶದಿಂದ ಇಂದು ಹೆಜಮಾಡಿ ಟೋಲ್ ವಿಲೀನಗೊಳಿಸಿದ್ದಾರೆ. ಇದಕ್ಕೆ ರಾಜ್ಯ ಬಿಜೆಪಿ ಸರಕಾರ ಹಾಗೂ ಎಂಪಿ, ಎಂಎಲ್ ಎಗಳೇ ನೇರ ಹೊಣೆ ಎಂದು ವಾಗ್ದಾಳಿ ನಡೆಸಿದರು.
ಧರಣಿಯಲ್ಲಿ ವಿಲಿಯಂ ಮಾರ್ಟಿಸ್, ಶೇಖರ ಹೆಜಮಾಡಿ, ಬಾಲಕೃಷ್ಣ ಶೆಟ್ಟಿ, ಸುಂದರ್ ಮಾಸ್ತರ್, ರಮೇಶ್ ಕಾಂಚನ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಪ್ರಶಾಂತ್ ಜತ್ತನ್ನ, ಪ್ರಖ್ಯಾತ್ ಶೆಟ್ಟಿ, ಸಂತೋಷ್ ಕುಲಾಲ್ ಪಕ್ಕಾಲು, ಕೆ. ಶಂಕರ್, ಫಣಿರಾಜ್, ಯಾಸೀನ್ ಮಲ್ಪೆ ಮೊದಲಾದ ಮುಖಂಡರು ಪಾಲ್ಗೊಂಡಿದ್ದರು.