ಸಿದ್ದರಾಮಯ್ಯರಿಗಾಗಿ ಚಾಮರಾಜಪೇಟೆ ಕ್ಷೇತ್ರ ಬಿಟ್ಟುಕೊಡಲು ಈಗಲೂ ಸಿದ್ಧ: ಜಮೀರ್ ಅಹಮದ್
ಬೆಂಗಳೂರು(Headlines Kannada): ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದರಾಮಯ್ಯ ಅವರಿಗೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರವನ್ನು ನೀಡಲು ಸಿದ್ಧನಿದ್ದು, ನಾನು ಈ ಕ್ಷೇತ್ರದ ಮಗನಾದರೆ, ಸಿದ್ದರಾಮಯ್ಯ ಈ ಕ್ಷೇತ್ರದ ಅಳಿಯ, ಇಲ್ಲಿಂದ ಸ್ಪರ್ಧಿಸಿದರೆ ಅವರಿಗೆ ಗೆಲುವು ಖಚಿತ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್‌ನ ಹಿರಿಯ ನಾಯಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ನನ್ನ ಬೇಡಿಕೆಗೆ ನಾನು ಈಗಲೂ ಬದ್ಧ ಎಂದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಿ.ಎಂ.ಇಬ್ರಾಹಿಂ ಕೂಡ ಸಿಎಂ ಆಗಬಹುದು ಎಂಬ ಮಾಜಿ ಸಿಎಂ, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಉತ್ತರಿಸಿದ ಜಮೀರ್ ಅಹಮದ್, ಮೈತ್ರಿ ಸರ್ಕಾರವಿದ್ದರೂ ಅಲ್ಪಸಂಖ್ಯಾತ ನಾಯಕರೇ ಸಿಎಂ ಆಗುತ್ತಾರೆ ಎಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ನನ್ನಿಂದ ಚಾಮರಾಜಪೇಟೆ ಕ್ಷೇತ್ರವನ್ನು ಕಸಿದುಕೊಳ್ಳಲಿ ನೋಡೋಣ. ನನ್ನ ವಿರುದ್ಧ ಯಾರೂ 3,500 ಮತಗಳನ್ನು ಗಳಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಹಾಗೂ ಜೆಡಿಎಸ್'ಗೆ ಸವಾಲು ಹಾಕಿದರು.