
ಕರಾವಳಿಯಲ್ಲಿ ಯುವಮುಖಗಳಿಗೆ ಮಣೆಹಾಕಿದ ಕಾಂಗ್ರೆಸ್; ಮಿಥುನ್ ರೈ, ಇನಾಯತ್ ಅಲಿ, ರಕ್ಷಿತ್ ಶಿವರಾಮ್'ಗೆ ಟಿಕೆಟ್!
ಮಂಗಳೂರು(Headlineskannada): ಈ ಬಾರಿಯ ವಿಧಾನ ಸಭಾ ಚುನಾವಣಾ ಕಣ ರಂಗೇರುತ್ತಿದ್ದು, ಒಂದೆಡೆ ಆಡಳಿತರೂಢ ಬಿಜೆಪಿ ಪ್ರಧಾನಿ ಮೋದಿಯನ್ನು ರಾಜ್ಯಕ್ಕೆ ಕರೆಸಿ ಮತಭೇಟೆಗೆ ಮುಂದಾಗಿದ್ದು, ಇನ್ನೊಂದೆಡೆ ಪ್ರತಿಪಕ್ಷ ಕಾಂಗ್ರೆಸ್ ಈ ಬಾರಿ ರಾಜ್ಯದ ಚುಕ್ಕಾಣಿ ಹಿಡಿಯಲು ಎಲ್ಲಿಲ್ಲದ ಕಸರತ್ತನ್ನು ಆರಂಭಿಸಿದೆ.
ಆಡಳಿತಾರೂಢ ಬಿಜೆಪಿಯನ್ನು ಸೋಲಿಸುವುದಕ್ಕೆ ಕಾಂಗ್ರೆಸ್ ಈ ಬಾರಿ ಹೊಸ ತಂತ್ರಗಾರಿಕೆಯ ಮೊರೆಹೋಗಿದೆ. ಗೆಲ್ಲುವ ಕುದುರೆಯನ್ನೇ ಈ ಬಾರಿ ಕಣಕ್ಕಿಳಿಸಲು ಮುಂದಾಗಿರುವ ಕಾಂಗ್ರೆಸ್, ಅದರಲ್ಲೂ ಕರಾವಳಿಯ ಹಿಂದುತ್ವದ ಪ್ರಯೋಗ ಶಾಲೆ ಎಂದೇ ಹೇಳಲಾಗುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುವ ಮುಖಗಳಿಗೆ ಮಣೆಹಾಕಲು ಕಾಂಗ್ರೆಸ್ ಮುಂದಾಗಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಗೆದ್ದಿರುವುದು ಕೇವಲ ಒಂದೇ ಒಂದು ಕ್ಷೇತ್ರ. ಅದು ಕಾಂಗ್ರೆಸ್ ನಾಯಕ ಯು.ಟಿ.ಖಾದರ್ ಅವರ ಮಂಗಳೂರು(ಉಳ್ಳಾಲ) ಕ್ಷೇತ್ರ. ಉಳಿದಂತೆ 7 ಕ್ಷೇತ್ರಗಳು ಬಿಜೆಪಿ ಪಾಲಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಎಲ್ಲ 8 ಕ್ಷೇತ್ರಗಳನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ರಣತಂತ್ರ ರೂಪಿಸಿದೆ.
ಕರಾವಳಿ ಭಾಗದಲ್ಲಿ ರಾಜಕಾರಣ ನಡೆಯುತ್ತಿರುವುದೇ ಜಾತಿ, ಧರ್ಮದ ಆಧಾರದಲ್ಲಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಈ ಬಾರಿ ಧರ್ಮವನ್ನು ಮೀರಿ ಮತದಾರರು ಕಾಂಗ್ರೆಸ್ ಕೈಹಿಡಿಯುವಂತೆ ಮಾಡಲು ಯುವ ಮುಖಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ತೀರ್ಮಾನಿಸಿದೆ.
ಮಂಗಳೂರು ಉತ್ತರ ಕ್ಷೇತ್ರದಿಂದ ಸಮಾಜಸೇವಕ, ಯುವಕರ ಕಣ್ಮಣಿ, ಕೊಡುಗೈ ದಾನಿಯಾಗಿರುವ ಇನಾಯತ್ ಅಲಿ, ಮೂಡಬಿದ್ರೆ ಕ್ಷೇತ್ರದಿಂದ ಮಿಥುನ್ ರೈ ಹಾಗು ಬೆಳ್ತಂಗಡಿ ಕ್ಷೇತ್ರದಿಂದ ರಕ್ಷಿತ್ ಶಿವರಾಂ ಅವರಿಗೆ ಟಿಕೆಟ್ ಅಂತಿಮವಾಗಿದ್ದು, ಘೋಷಣೆಯಷ್ಟೇ ಬಾಕಿ ಇದೆ.
ಇನಾಯತ್ ಅಲಿ, ಮಿಥುನ್ ರೈ ಹಾಗು ರಕ್ಷಿತ್ ಶಿವರಾಂ ಜನಪ್ರಿಯ ಯುವ ನಾಯಕರಾಗಿದ್ದು, ಇವರ ಹಿಂದೆ ದೊಡ್ಡ ಯುವಕರ ಪಡೆಯೇ ಇದೆ. ಜೊತೆಗೆ ಇವರು ಈ ಬಾರಿಯ ಗೆಲ್ಲುವ ಕುದುರೆ ಎಂದೇ ಬಿಂಬಿತರಾಗಿರುವುದರಿಂದ ಚುನಾವಣಾ ಟಿಕೆಟ್ ಫಿಕ್ಸ್ ಆಗಿದೆ.
ಇಂಥ ಯುವ ಮುಖಗಳು ಎಲ್ಲ ಜಾತಿ-ಧರ್ಮದವರೊಂದಿಗೆ ಗುರುತಿಸಿಕೊಂಡಿರುವುದರಿಂದ ಇವರಿಗೆ ಮತ ಹಾಕಿದರೆ ಮುಂದೆ ಕರಾವಳಿ ಅಭಿವೃದ್ಧಿ ಕಾಣುವ ಜೊತೆಗೆ ಕೋಮುಸಾಮರಸ್ಯ, ಸೌಹಾರ್ದತೆಗೆ ಬೆಸುಗೆಯಾಗಲಿದ್ದಾರೆ ಎಂಬ ನಂಬಿಕೆ ಕೂಡ ಕರಾವಳಿ ಭಾಗದ ಮತದಾರರಲ್ಲಿದೆ.
ಇನಾಯತ್ ಅಲಿ, ಮಿಥುನ್ ರೈ ಹಾಗು ರಕ್ಷಿತ್ ಶಿವರಾಂ ಅವರಿಗೆ ಕಾಂಗ್ರೆಸ್ ಟಿಕೆಟ್ ಫಿಕ್ಸ್ ಆಗಿರುವುದರಿಂದ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಕಾಂಗ್ರೆಸ್ ಈಗಾಗಲೇ ಗೌಪ್ಯವಾಗಿ ಸೂಚಿಸಿದೆ.