ಈಗ ಎಲ್ಲರ ಚಿತ್ತ ಮಂಗಳೂರು ಉತ್ತರ ಕ್ಷೇತ್ರದತ್ತ; ಬಿಜೆಪಿ ಪಾಲಿಗೆ ಬಿಸಿತುಪ್ಪವಾದ ಕಾಂಗ್ರೆಸ್ಸಿನ ಇನಾಯತ್ ಅಲಿ: ಸಮಾಜಸೇವೆಯನ್ನು ಕೊಂಡಾಡುವ ಕ್ಷೇತ್ರದ ಮತದಾರರು !
ಮಂಗಳೂರು(Headlineskannada): ಕರಾವಳಿ ಭಾಗದಲ್ಲಿ ಈ ಬಾರಿಯ ವಿಧಾನ ಸಭಾ ಚುನಾವಣಾ ಕಣ ರಂಗೇರುತ್ತಿದ್ದು, ಈಗ ಎಲ್ಲರ ಚಿತ್ತ ಮಂಗಳೂರು ಉತ್ತರ ಕ್ಷೇತ್ರದತ್ತ ನೋಡುವಂತಾಗಿದೆ. ಅದಕ್ಕೆ ಮುಖ್ಯ ಕಾರಣ ಈ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸಿನಿಂದ ಕಣಕ್ಕಿಳಿಯಲಿರುವ ಇನಾಯತ್ ಅಲಿ.
ಯಾವುದೇ ಫಲಾಪೇಕ್ಷೆವಿಲ್ಲದೆ ಹಲವಾರು ವರ್ಷಗಳಿಂದ ಪ್ರಚಾರವಿಲ್ಲದೆಯೇ ಸರ್ವಧರ್ಮೀಯರಿಗೂ ದಾನ, ನೆರವನ್ನು ನೀಡುತ್ತಾ ಬಂದಿರುವ ಇನಾಯತ್ ಅಲಿಯವರ ನಡೆ ಬಹುಪ್ರಶಂಶನೀಯ ಎನ್ನುತ್ತಾರೆ ಸರ್ವಧರ್ಮೀಯರು. ಇವರ ಈ ಸೇವೆಯನ್ನು ಕೊಂಡಾಡದ ಜನರಿಲ್ಲ. ಪ್ರಚಾರವನ್ನು ಬಯಸದೆ ತೆರೆಮರೆಯಲ್ಲಿ ಇವರು ಮಾಡುತ್ತಿರುವ ಜನಸೇವೆಯೇ ಇಂದು ಓರ್ವ ಶಾಸಕನಾಗುವತ್ತ ಕೊಂಡೊಯ್ದಿದೆ.
ತನ್ನ ಎಳೆಯವಯಸ್ಸಿನಿಂದಲೇ ಸಮಾಜ ಸೇವೆ, ನಿರ್ಗತಿಕರಿಗೆ ಸಹಾಯಹಸ್ತ ನೀಡುತ್ತಾ ಬಂದಿರುವ ಕಳಂಕ ರಹಿತ ಇನಾಯತ್ ಅಲಿ, ಈ ಬಾರಿ ಮಂಗಳೂರು ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರವುದು ಬಿಜೆಪಿಗೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇನಾಯತ್ ಅಲಿ ಎಂಬ ಕೊಡುಗೈ ದಾನಿ ಹೆಸರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಳದವರಿಲ್ಲ. ನಗುಮುಖದ ಸರಳ ಸಜ್ಜನಿಕೆಯ ಇನಾಯತ್ ಅಲಿ, ಕೇವಲ ಒಂದು ಸಮುದಾಯಕ್ಕೆ ಸೀಮಿತರಾಗದೆ ಸರ್ವಧರ್ಮಿಯರಿಗೂ ಪ್ರೀತಿಪಾತ್ರರಾದ ವ್ಯಕ್ತಿ. ಅವರ ಮನೆಯಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಸಹಾಯಹಸ್ತ ಕೇಳಿ ಬರುವ ಜನರಿಗೆ ಎಂದೂ ಬರೀಗೈಯ್ಯಲ್ಲಿ ಕಳುಹಿಸಿದವರಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂದು ಯಾರನ್ನು ನೋಡಿದವರಲ್ಲ. ಎಲ್ಲರ ಪಾಲಿಗೂ 'ಬಡವರ ಬಂಧು' ಎಂದೇ ಎನಿಸಿಕೊಂಡವರು.
ಸರ್ವಧರ್ಮೀಯರ ಪಾಲಿನ ಆಶಾಕಿರಣವಾಗಿರುವ ಇನಾಯತ್ ಅಲಿ, ಶುದ್ಧಹಸ್ತರಾಗಿದ್ದು, ಉದ್ಯಮಿಯಾಗಿ ರಾಜ್ಯಾದ್ಯಂತ ಹೆಸರು ಮಾಡಿದ್ದರೂ, ಅದಕ್ಕಿಂತ ದೊಡ್ಡ ಹೆಸರನ್ನು ಬಡವರ ಪಾಲಿಗೆ ನೀಡುತ್ತಿರುವ ಸೇವೆಯಿಂದ ಪಡೆದುಕೊಂಡಿದ್ದಾರೆ.
ಕೆಪಿಸಿಸಿ ಕಾರ್ಯದರ್ಶಿಯಾಗಿರುವ ಇನಾಯತ್ ಅಲಿ, ಹಲವಾರು ವರ್ಷಗಳಿಂದ ಬಡಕುಟುಂಬದ ಹೆಣ್ಣು ಮಕ್ಕಳ ಮದುವೆಗೆ, ನಿರ್ಗತಿಕರಿಗೆ ಮನೆ ಕಟ್ಟಲು, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ, ಮಸೀದಿ, ಮಂದಿರ, ಚರ್ಚುಗಳಿಗೆ ಜಾತಿ ಧರ್ಮದ ಎಲ್ಲೇ ಮೀರಿ ನೆರವು ನೀಡುತ್ತಾ ಬಂದಿರುವುದು ಅವರು ಶಾಸಕ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಎಂಬುದನ್ನು ದೃಢಪಡಿಸಿದೆ.
ಸರ್ವಧರ್ಮೀಯರ ನೆಚ್ಚಿನ ನಾಯಕ ಈ ಬಾರಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕನಾಗಬೇಕೆಂಬುದು ಈ ಭಾಗದ ಜನರ ಆಶಯ, ಅಭಿಪ್ರಾಯವೂ ಆಗಿದೆ. ಇದು ಈಗ ಬಿಜೆಪಿಯ ಪಾಲಿಗೆ ನುಂಗಲಾರದ ತುತ್ತಾಗಿದೆ. ಸಮಾಜ ಸೇವೆ, ಬಡವರ ಪರ ದೊಡ್ಡ ಕಾಳಜಿ ಇಟ್ಟುಕೊಂಡಿರುವ ಇನಾಯತ್ ಅಲಿ ಈ ಬಾರಿ ಕಣಕ್ಕಿಳಿದರೆ ಮತದಾರರು ಜಾತಿ, ಧರ್ಮ ನೋಡದೆ ಅವರ ಪರ ನಿಲ್ಲುವುದು ಖಚಿತ ಎನ್ನುವುದು ರಾಜಕೀಯ ಚಾವಡಿಯಲ್ಲಿ ಕೇಳಿಬರುತ್ತಿರುವ ಮಾತು.
ಈ ಬಾರಿ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಗೆಲ್ಲುವ ಕುದುರೆ ಎಂದೇ ಹೇಳಲಾಗುತ್ತಿರುವ ಇನಾಯತ್ ಅಲಿಯವರ ಸಮಾಜ ಸೇವೆ, ಜನರೊಂದಿಗೆ ಬೆರೆಯುವ ಸರಳತೆ ಕಂಡು ದಂಗಾಗಿರುವ ಬಿಜೆಪಿ ಮುಖಂಡರು ಕಾಂಗ್ರೆಸ್'ನ ಕೈ ಹಿಡಿಯಲು ಮುಂದಾಗಿರುವುದು ಗುಟ್ಟಾಗಿ ಉಳಿದಿಲ್ಲ.
ಬಿಜೆಪಿ ಆಡಳಿತದಿಂದ ರೋಸಿ ಹೋಗಿರುವ ಜನ ಒಂದೆಡೆಯಾದರೆ, ಇನ್ನೊಂದೆಡೆ ಇನಾಯತ್ ಅಲಿಯವರ ಜನಸೇವೆ ಕಂಡು ಕಾಂಗ್ರೆಸಿನತ್ತ ಜನ ವಾಲುತ್ತಿದ್ದಾರೆ. ಜಾತಿ-ಧರ್ಮಕ್ಕಿಂತಲೂ ಜನರ ಕಲ್ಯಾಣ, ಅಭಿವೃದ್ಧಿ ಕಾರ್ಯಗಳೇ ಮುಖ್ಯ ಎನ್ನುತ್ತಿರುವ ಮಂಗಳೂರು ಉತ್ತರ ಕ್ಷೇತ್ರದ ಮತದಾರರು, ಇನಾಯತ್ ಅಲಿ ಅವರ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದಾರೆ.