ದೇಶಾದ್ಯಂತ 74ನೇ ಗಣರಾಜ್ಯೋತ್ಸವದ ಸಂಭ್ರಮ; ಕರ್ತವ್ಯಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಧ್ವಜಾರೋಹಣ: ಮೋದಿ, ಈಜಿಪ್ಟ್ ಅಧ್ಯಕ್ಷ ಭಾಗಿ
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಭಾರತದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ತವ್ಯಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳಿಗೆ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಯದೀಪ್ ಧನಕರ್ ಸಾಥ್ ಜೊತೆಯಾದರು. ಬಳಿಕ ಭವ್ಯ ಮೆರವಣಿಗೆ ಸಮಾರಂಭದಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ.
ಧ್ವಜಾರೋಹಣ ಕಾರ್ಯಕ್ರಮದ ಬೆನ್ನಲ್ಲೇ ರಾಷ್ಟ್ರಪತಿಗಳಿಗೆ 21 ತೋಪಿನ ಸನ್ಮಾನ ನೀಡಿ ಗೌರವಿಸಲಾಯಿತು. ಬಳಿಕ ಗಣರಾಜ್ಯೋತ್ಸವದ ಪರೇಡ್ ನಡೆಯಿತು. ರಾಜಪಥ್ ಕರ್ತವ್ಯಪಥ ಎಂದು ಮರುನಾಮಕರಣಗೊಂಡ ಬಳಿಕ ನಡೆಯುತ್ತಿರುವ ಮೊದಲ ಗಣರಾಜ್ಯೋತ್ಸವ ಕಾರ್ಯಕ್ರಮ ಇದಾಗಿದ್ದು, ಪರೇಡ್ ಮೂಲಕ ಜಗತ್ತಿನ ಮುಂದೆ ದೇಶದ ಶಕ್ತಿ ಕರ್ತವ್ಯಪಥದಲ್ಲಿ ಮೊದಲ ಬಾರಿಗೆ ಅನಾವರಣವಾಯಿತು. ಕರ್ತವ್ಯಪಥದಲ್ಲಿ ಧ್ವಜಾರೋಹಣಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಅಮರ್ ಜವಾನ್ ಜ್ಯೋತಿ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಸೇನಾ ಮುಖ್ಯಸ್ಥರು ಮೋದಿಗೆ ಸಾಥ್ ನೀಡಿದರು.
ಭಾರತದಲ್ಲಿ ಇದೇ ಮೊದಲ ಬಾರಿಗೆ ಈಜಿಪ್ಟ್ ಸೇನಾಪಡೆಗಳು ಕೂಡ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗಿಯಾಗಿದ್ದು, ಈಜಿಪ್ಟ್ ಸೇನಾ ಪಡೆಗಳ 144 ಸೈನಿಕರು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಿದ್ದಾರೆ.