ಸಿಎಂ ಬೊಮ್ಮಾಯಿ ಬಗ್ಗೆ ಲಘುವಾಗಿ ಮಾತನಾಡಿದ್ದು ಸಿದ್ದರಾಮಯ್ಯಗೆ ಶೋಭೆಯಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಉಡುಪಿ (Headlines Kannada): ಸಿಎಂ ಬೊಮ್ಮಾಯಿ ಬಗ್ಗೆ ಲಘುವಾಗಿ ಮಾತನಾಡಿರುವುದು ಸಿದ್ದರಾಮಯ್ಯಗೆ ಶೋಭೆಯಲ್ಲ. ಅವರು ಕ್ಷಮಾಪಣೆ ಕೇಳುತ್ತಾರೆ ಎಂದು ನನಗೆ ಅನಿಸುತ್ತದೆ. ಸಿದ್ದರಾಮಯ್ಯ ಬಹಳ ದೊಡ್ಡವರಾಗಿರುವುದರಿಂದ ಕ್ಷಮಾಪಣೆ ಕೇಳಬಹುದು. ಸಿದ್ದರಾಮಯ್ಯನ ಭಾಷೆ ಅವರ ದೃಷ್ಟಿಯಲ್ಲಿ ಸರಿ ಅಂತ ಆದರೆ ಅದಕ್ಕೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಸಣ್ಣ ಮಾತನ್ನು ಆಡುವುದು ಮತ್ತೆ ಅದನ್ನೇ ಸರಿ ಎಂದು ವಾದಿಸುವುದು ಅಕ್ಷಮ್ಯ ಅಪರಾಧ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ನಾಯಿಮರಿ ಎಂದು ಹೇಳಿರುವ ಸಿದ್ದರಾಮಯ್ಯ ಹೇಳಿಕೆಗೆ ಉಡುಪಿಯಲ್ಲಿ ತಿರುಗೇಟು ನೀಡಿದ ಅವರು, ಸಿದ್ದರಾಮಯ್ಯ ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ಸಿದ್ದರಾಮಯ್ಯ ಈಗ ವಿರೋಧ ಪಕ್ಷದ ನಾಯಕ ಕೂಡ ಆಗಿದ್ದಾರೆ. ಹಾಗಾಗಿ ಈ ಮಾತು ಅವರ ಘನತೆಗೆ ಶೋಭೆ ತರಲ್ಲ. ಯಾರನ್ನಾದರೂ ಅಪಮಾನ ಮಾಡಿ ಚುನಾವಣೆಯನ್ನು ಗೆಲ್ಲುತ್ತೇವೆ ಎಂಬ ಆಲೋಚನೆ ಇದ್ದರೆ, ಇದು ನಮ್ಮ ದುರಾದೃಷ್ಟ ಇದು ಸಮಾಜದ ದುರಾದೃಷ್ಟ ಎಂದು ಕಿಡಿಕಾರಿದರು.