
ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೋ ಯಾತ್ರೆ'ಗೆ ಬೆಂಬಲಿಸಿ ಪತ್ರ ಬರೆದ ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ! ಪತ್ರದಲ್ಲಿ ಏನಿದೆ..?
ಅಯೋಧ್ಯೆ(Headlines Kannada): ದೇಶಾದ್ಯಂತ ರಾಹುಲ್ ಗಾಂಧಿ ವೇತೃತ್ವದಲ್ಲಿ ನಡೆಯುತ್ತಿರುವ 'ಭಾರತ್ ಜೋಡೋ ಯಾತ್ರೆ'ಗೆ ಬೆಂಬಲ ಸೂಚಿಸಿ ಅಯೋಧ್ಯೆ ರಾಮ ಜನ್ಮಭೂಮಿ ದೇಗುಲದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಪತ್ರ ಬರೆದಿದ್ದಾರೆ.
ರಾಹುಲ್ ಗಾಂಧಿ ಅವರಿಗೆ ಪತ್ರವೊಂದನ್ನು ರವಾನಿಸಿರುವ ಆಚಾರ್ಯ ಸತ್ಯೇಂದ್ರ ದಾಸ್, ತಮ್ಮ ಆಶೀರ್ವಾದ ಸದಾ ನಿಮ್ಮೊಂದಿಗಿರಲಿದೆ ಎಂದು ಹರಸಿದ್ದಾರೆ.
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯು ಮಂಗಳವಾರ ಉತ್ತರ ಪ್ರದೇಶ ತಲುಪಲಿದೆ. ‘ನೀವು ನಮ್ಮ ದೇಶಕ್ಕಾಗಿ ಮಾಡುವ ಯಾವುದೇ ಕೆಲಸ ಎಲ್ಲರಿಗೂ ಪ್ರಯೋಜನಕಾರಿ. ನನ್ನ ಆಶೀರ್ವಾದ ಸದಾ ನಿಮ್ಮೊಂದಿಗಿರಲಿದೆ’ ಎಂದು ದಾಸ್ ಅವರು ಪತ್ರದಲ್ಲಿ ಬರೆದಿದ್ದಾರೆ.
ಈ ಪತ್ರವನ್ನು ಆಚಾರ್ಯ ಸತ್ಯೇಂದ್ರ ದಾಸ್ ಅವರು ಯುವ ಕಾಂಗ್ರೆಸ್ ಮುಖಂಡ ಗೌರವ್ ತಿವಾರಿ ಮೂಲಕ ಹಸ್ತಾಂತರ ಮಾಡಿದ್ದಾರೆ. 'ರಾಮನ ಆಶೀರ್ವಾದ ನಿಮ್ಮೊಂದಿಗೆ ಸದಾ ಇರಲಿ‘ ಎಂದೂ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಯೋಧ್ಯೆಯ ಹನುಮಾನ್ ಗರ್ಹಿ ದೇಗುಲದ ಅರ್ಚಕ ರಾಜು ದಾಸ್, ’ಇದು ಸತ್ಯೇಂದ್ರ ದಾಸ್ ಅವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದಾರೆ.
ಆಚಾರ್ಯ ಸತ್ಯೇಂದ್ರ ದಾಸ್ ಅವರ ಮಾತನ್ನು ನಾವು ಒಪ್ಪುವುದಿಲ್ಲ. ಕಾಂಗ್ರೆಸ್ ಯಾವಾಗಲೂ ಹಿಂದೂ ವಿರೋಧಿ’ ಎಂದು ಅರ್ಚಕ ರಾಜು ದಾಸ್ ಹೇಳಿದ್ದಾರೆ.