35 ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿಯೇ ಬಿಟ್ಟು 5 ಗಂಟೆ ಮೊದಲೇ ಸಿಂಗಪುರದತ್ತ ಹಾರಿದ ವಿಮಾನ!
ನವದೆಹಲಿ: ಅಮೃತಸರ ವಿಮಾನ ನಿಲ್ದಾಣದಲ್ಲಿ ಬರೊಬ್ಬರಿ 35 ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿಯೇ ಬಿಟ್ಟು ಹೋಗಿರುವ ಘಟನೆ ಅಮೃತಸರದಲ್ಲಿ ನಡೆದಿದೆ.
ಅಮೃತಸರದಿಂದ ಸಿಂಗಪುರಕ್ಕೆ ಹೋಗಬೇಕಿದ್ದ ಸ್ಕೂಟ್ ಏರ್‌ಲೈನ್ಸ್ ವಿಮಾನವು ಬುಧವಾರ 35 ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಆಗಿರುವ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಸ್ಕೂಟ್ ಏರ್‌ಲೈನ್ಸ್ ವಿಮಾನವು ಅಮೃತಸರ ವಿಮಾನ ನಿಲ್ದಾಣದಿಂದ ಬುಧವಾರ ರಾತ್ರಿ 7.55 ಕ್ಕೆ ಹೊರಡಬೇಕಿತ್ತು, ಆದರೆ 35 ಪ್ರಯಾಣಿಕರನ್ನು ನಿಲ್ದಾಣದಲ್ಲಿಯೇ ಬಿಟ್ಟು 3 ಗಂಟೆಗೆ ಟೇಕ್ ಆಫ್ ಆಗಿತ್ತು. ಈ ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಇದರಿಂದಾಗಿ ವಿಮಾನ ಹತ್ತಬೇಕಿದ್ದ 35 ಮಂದಿ ವಿಮಾನ ನಿಲ್ದಾಣ ತಲುಪಿದರೂ ಪ್ರಯೋಜನವಾಗಲಿಲ್ಲ.
ತಮ್ಮನ್ನು ಬಿಟ್ಟು ಹೋದ ವಿಮಾನದ ಸಿಬ್ಬಂದಿಯ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತ ಪ್ರಯಾಣಿಕರು ಅಮೃತಸರ ವಿಮಾನ ನಿಲ್ದಾಣದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದಲ್ಲದೆ ಪ್ರತಿಭಟನೆಯನ್ನೂ ಮಾಡಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಿಂದ ದೆಹಲಿಗೆ ಹೋಗಬೇಕಿದ್ದ ‘ಗೋಫಸ್ಟ್’ ವಿಮಾನವು 50ಕ್ಕೂ ಹೆಚ್ಚು ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿಯೇ ಬಿಟ್ಟು ಹಾರಿದ್ದನ್ನು ಇಲ್ಲಿ ಸ್ಮರಿಸಬಹುದು.