ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ದಕ್ಷಿಣಕನ್ನಡ ಜಿಲ್ಲೆಯ ನಿವೃತ್ತ ನ್ಯಾ.ಅಬ್ದುಲ್ ನಜೀರ್ ನೇಮಕ
ಬೆಂಗಳೂರು: ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ದಕ್ಷಿಣಕನ್ನಡ ಜಿಲ್ಲೆಯವರಾದ, ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಅವರು ನೇಮಕರಾಗಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೇಮಕ ಕಾರ್ಯ ಮಾಡಿದ್ದು, ಇಂದು 12 ನೂತನ ರಾಜ್ಯಪಾಲ ಮತ್ತು ಲೆಫ್ಟಿನೆಂಟ್ ಗವರ್ನರ್ಗಳ ಪಟ್ಟಿಯಲ್ಲಿ ಅಬ್ದುಲ್ ನಜೀರ್ ಹೆಸರೂ ಇದೆ. ಮೂಲತಃ ದಕ್ಷಿಣಕನ್ನಡ ಜಿಲ್ಲೆಯವರಾದ ಅಬ್ದುಲ್ ನಜೀರ್ ಅವರು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಕಳೆದ ತಿಂಗಳು ಜನವರಿ 4ರಂದು ನಿವೃತ್ತರಾಗಿದ್ದರು.
ಮೂಡಬಿದಿರೆಯ ಬೆಳುವಾಯಿಯವರು....
ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆಯ ಬೆಳುವಾಯಿ ಗ್ರಾಮದಲ್ಲಿ ಜನಿಸಿದ ಎಸ್ ಅಬ್ದುಲ್ ನಜೀರ್, ಮಹಾವೀರ ಕಾಲೇಜಿನಲ್ಲಿ ಬಿಕಾಂ ಹಾಗು ಎಸ್ಡಿಎಂ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದಿದ್ದು, ಬಳಿಕ ಕರ್ನಾಟಕ ಹೈಕೋರ್ಟ್ ವಕೀಲರಾಗಿ ನೇಮಕವಾದರು. 2003ರಲ್ಲಿ ಹೈಕೋರ್ಟ್ನಲ್ಲಿ ಹೆಚ್ಚುವರಿ ನ್ಯಾಯಾಧೀಶರು ಆಗಿ, ನಂತರ ಖಾಯಂ ನ್ಯಾಯಾಧೀಶರಾಗಿ ನೇಮಕವಾದರು. 2017ರ ಫೆಬ್ರುವರಿಯಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಅವರು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದರು. ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗದೇ ನೇರವಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾದ 3ನೇ ಜಡ್ಜ್ ಅವರಾಗಿದ್ದಾರೆ.
ಐತಿಹಾಸಿಕ ತೀರ್ಪಿನಲ್ಲಿ...
2017ರಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ನೇಮಕವಾದ ಬಳಿಕ ಅಬ್ದುಲ್ ನಜೀರ್ ಕೆಲ ಮಹತ್ವದ ಪ್ರಕರಣಗಳ ತೀರ್ಪು ನೀಡಿದ ನ್ಯಾಯಪೀಠಗಳಲ್ಲಿ ಭಾಗಿಯಾಗಿದ್ದಾರೆ. 2017ರಲ್ಲಿ ತ್ರಿವಳಿ ತಲಾಖ್ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠದಲ್ಲಿದ್ದ ಅವರು, ಈ ಐತಿಹಾಸಿಕ ತೀರ್ಪಿನಲ್ಲಿ ನ್ಯಾಯಪೀಠವು ತ್ರಿವಳಿ ತಲಾಖ್ ಅನ್ನು ಅಸಿಂಧುಗೊಳಿಸಿತ್ತು.
ಬಹುದೊಡ್ಡ ವಿವಾದವಾಗಿದ್ದ 2019ರ ಅಯೋಧ್ಯೆ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸರ್ವೋಚ್ಚ ನ್ಯಾಯಪೀಠದಲ್ಲೂ ಅಬ್ದುಲ್ ನಜೀರ್ ಇದ್ದರು. ಜೊತೆಗೆ ಕೇಂದ್ರದ ನೋಟ್ ಬ್ಯಾನ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಪೀಠದಲ್ಲೂ ಅಬ್ದುಲ್ ನಜೀರ್ ಇದ್ದರು.