ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕೆ ಗೈರಾದ ಅನಂತ್ ನಾಗ್; ಕುತೂಹಲ ಕೆರಳಿಸಿದ ಮುಂದಿನ ನಡೆ !
ಬೆಂಗಳೂರು: ರಾಜ್ಯಾದ್ಯಂತ ಸುದ್ದಿಯಾಗಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಬಿಜೆಪಿ ಪಕ್ಷ ಸೇರ್ಪಡೆ ಠುಸ್ಸಾಗಿದೆ. ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಗೈರಾದ ಅನಂತ್ ನಾಗ್ ಮುಂದಿನ ನಡೆ ಬಹಳ ಕುತೂಹಲ ಕೆರಳಿಸಿದೆ.
BJP ರಾಜ್ಯಾಧ್ಯಕ ನಳೀನ್ ಕುಮಾರ್ ಕಟೀಲ್, ಸಚಿವ ಸುಧಾಕರ್, ಮುನಿರತ್ನ ಸಮ್ಮುಖದಲ್ಲಿ ಬುಧವಾರ ಸಂಜೆ ಬಿಜೆಪಿ ಕಛೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರೆಲ್ಲ ಕಾದುಕುಳಿತಿದ್ದು ಬಿಟ್ಟರೆ ಅನಂತ್ ನಾಗ್ ಸುದ್ದಿಯೇ ಇಲ್ಲ. ಅವರು ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಶಾಕ್ ನೀಡಿದ್ದರು.
ಸೇರ್ಪಡೆ ಕಾರ್ಯಕ್ರಮ ಫಿಕ್ಸ್ ಆಗಿತ್ತಾದರೂ ಅನಂತ್ ನಾಗ್ ಗೈರಾಗಿದ್ದು ಯಾವ ಕಾರಣಕ್ಕೆ ಎಂಬುದು ಇನ್ನೂ ಸ್ಪಷ್ಟ ಆಗಿಲ್ಲ. ಕೆಲವೇ ದಿನದಲ್ಲಿ ಮೋದಿ ಕರ್ನಾಟಕಕ್ಕೇ ಆಗಮಿಸುತ್ತಿದ್ದು ಈ ವೇಳೆ ಅನಂತ್ ನಾಗ್ ಸೇರ್ಪಡೆ ಆಗಲಿದ್ದಾರೆ ಎಂದು ಬಿಜೆಪಿ ನಾಯಕರು ಸಬೂಬು ನೀಡುತ್ತಿದ್ದಾರೆ. ಆದರೆ ಇದು ಕೂಡ ಅಧಿಕೃತ ಅಲ್ಲ.
ಜನತದಳದಿಂದ ರಾಜಕೀಯ ಪ್ರವೇಶ ಮಾಡಿದ್ದ ಅನಂತ್ ನಾಗ್ ಅವರು 2004 ಚುನಾವಣೆ ಬಳಿಕ ದೂರ ಉಳಿದಿದ್ದರು. ಕೆಲವು ವರ್ಷಗಳಿಂದ ಮೋದಿ ಬಗ್ಗೆ ಗುಣಗಾನ ಮಾಡುತ್ತಲೇ ತಿರುಗುತ್ತಿರುವ ಅನಂತ್ ನಾಗ್, ಪಕ್ಷ ಸೇರ್ಪಡೆಯಿಂದ ದೂರ ಉಳಿದರೆ ಎನ್ನುವ ಪ್ರಶ್ನೆ ಮೂಡಿದೆ.