ರಾಜ್ಯ ಬಜೆಟ್ ಮಂಡನೆ ವೇಳೆ ಹಳೆಯ ಬಜೆಟ್ ಓದಿ ಮುಜುಗರಕ್ಕೀಡಾದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್!
ಜೈಪುರ(Headlines Kannada): ಇಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಈ ಸಾಲಿನ ರಾಜ್ಯ ಬಜೆಟ್ ಮಂಡಿಸುವ ವೇಳೆ ಹಿಂದಿನ ವರ್ಷದ ಬಜೆಟ್ ಪ್ರತಿ ಓದಿ ನಗೆಪಾಟಲಿಗೀಡಾಗಿದ್ದಾರೆ.
ಹಳೆಯ ಬಜೆಟ್ ಪ್ರತಿ ಓದುತ್ತಿದ್ದ ವೇಳೆ ಸಚಿವ ಮಹೇಶ್ ಜೋಶಿ, ಇದು ಹಳೆಯ ಬಜೆಟ್'ನ ಪ್ರತಿ ಓದುತ್ತಿದ್ದೀರಿ ಎಂದು ತಡೆದರು.
ಬಜೆಟ್‌ನ ಮೊದಲ 2 ಘೋಷಣೆಗಳನ್ನು ಮುಖ್ಯಮಂತ್ರಿ ಮಾಡುತ್ತಲೇ ಪ್ರತಿಪಕ್ಷಗಳು ಗದ್ದಲ ಸೃಷ್ಟಿಸಿದವು, ಸದನದ ಬಾವಿಗೆ ನುಗ್ಗಿದವು. ಸಮಾಧಾನದಿಂದ ಇರುವಂತೆ ಸ್ಪೀಕರ್ ಸಿಪಿ ಜೋಶಿ ಅವರು ವಿನಂತಿಸಿಕೊಂಡರೂ ಪ್ರತಿಪಕ್ಷಗಳು ಗದ್ದಲ ಮುಂದುವರಿಸಿದ್ದರಿಂದ ಸದನವನ್ನು ಅರ್ಧ ಗಂಟೆ ಮುಂದೂಡಲಾಯಿತು. ಕಲಾಪ ಮುಂದೂಡಿದ ನಂತರ ಬಿಜೆಪಿ ಶಾಸಕರು ಸದನದ ಬಾವಿಗೆ ಇಳಿದು ಧರಣಿ ನಡೆಸಿದರು.
ಈ ವಿಷಯದ ಬಗ್ಗೆ ಮಾತನಾಡಿದ ಬಿಜೆಪಿ ನಾಯಕಿ, ಮಾಜಿ ಸಿಎಂ ವಸುಂಧರಾ ರಾಜೆ ಸಿಂಧಿಯಾ, ’8 ನಿಮಿಷಗಳ ಕಾಲ CM ಹಳೆಯ ಬಜೆಟ್ ಪ್ರತಿಯನ್ನೇ ಓದಿದರು. ನಾನು ಸಿಎಂ ಆಗಿದ್ದಾಗ ಕನಿಷ್ಠ 2-3 ಬಾರಿ ಬಜೆಟ್ ಪ್ರತಿ ಓದುತ್ತಿದ್ದೆ ಮತ್ತು ಪರಿಶೀಲಿಸುತ್ತಿದ್ದೆ. ಈ ರೀತಿಯ ದೊಡ್ಡ ದಾಖಲೆಯನ್ನು ನಿರ್ಲಕ್ಷ್ಯದಿಂದ ಓದಿರುವ CM ಕೈಯಲ್ಲಿ ರಾಜಸ್ಥಾನ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ಯಾರಾದರೂ ಊಹಿಸಬಹುದು’ ಎಂದು ಟೀಕಿಸಿದ್ದಾರೆ.