'ಸಾಕಪ್ಪ ಸಾಕು...ಕಿವಿ ಮೇಲೆ ಹೂವ'; ಪೋಸ್ಟರ್ ವಾರ್ ಆರಂಭಿಸಿದ ಕಾಂಗ್ರೆಸ್; ಮಂಗಳೂರು-ಬೆಂಗಳೂರಿನಲ್ಲಿ ಕಾಣಿಸಿಕೊಂಡ ಪೋಸ್ಟರ್
Saturday, February 18, 2023
ಬೆಂಗಳೂರು: ರಾಜ್ಯ ಬಜೆಟ್ ಮಂಡನೆಯ ವೇಳೆ ವಿಧಾನ ಸೌಧದ ಅಧಿವೇಶನದಲ್ಲಿ ಕಿವಿಗೆ ಹೂವಿಟ್ಟುಕೊಂಡು ಪ್ರತಿಭಟಿಸಿದ್ದ ಕಾಂಗ್ರೆಸ್ ಈಗ, ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 'ಸಾಕಪ್ಪ ಸಾಕು...ಕಿವಿ ಮೇಲೆ ಹೂವ' ಎಂದಿರುವ ಪೋಸ್ಟರ್‌ಗಳನ್ನು ಅಂಟಿಸುವುದರ ಮೂಲಕ ಬಿಜೆಪಿ ವಿರುದ್ಧ 'ಪೋಸ್ಟರ್ ವಾರ್' ಮತ್ತೆ ಆರಂಭಿಸಿದೆ.
ಆಡಳಿತಾರೂಢ BJP ನೀಡಿದ ಭರವಸೆಗಳನ್ನು ಈಡೇರಿಸದ ವಿರುದ್ಧ ತಮ್ಮ ಪ್ರತಿಭಟನೆಯನ್ನು ತೋರಿಸಲು ಕಾಂಗ್ರೆಸ್ ಶಾಸಕರು, ಸಿಎಂ ಬೊಮ್ಮಾಯಿ ಅವರು ಬಜೆಟ್ ಮಂಡಣೆ ವೇಳೆ ವಿಧಾನಸಭೆಗೂ ಕಿವಿಯ ಮೇಲೆ ಚೆಂಡುಹೂ ಇಟ್ಟುಕೊಂಡು ಪ್ರತಿಭಟಿಸಿದ್ದರು.
ಇದೀಗ ಬೀದಿಗಿಳಿದಿರುವ ಕಾಂಗ್ರೆಸ್, 'ಕಿವಿ ಮೇಲೆ ಹೂವ' ಅಭಿಯಾನವನ್ನು ಹಮ್ಮಿಕೊಂಡಿದ್ದು, ಶನಿವಾರ ಬೆಳಗ್ಗೆ ಬೆಂಗಳೂರು ನಗರ ಮತ್ತು ಮಂಗಳೂರಿನ ಹಲವೆಡೆ BJPಯ ಸಾಧನೆಯನ್ನು ತೋರಿಸುವ 'ಬಿಜೆಪಿಯೇ ಭರವಸೆ' ಎಂದಿದ್ದ ಗೋಡೆ ಪೇಂಟಿಂಗ್‌ಗಳ ಮೇಲ್ಭಾಗದಲ್ಲಿ 'ಕಿವಿ ಮೇಲೆ ಹೂವ' ಪೋಸ್ಟರ್‌ಗಳು ಅಂಟಿಸಿ ವಿರೋಧ ವ್ಯಕ್ತಪಡಿಸಿದೆ.