ರಾಜ್ಯಕ್ಕೆ ಮೋದಿ, ಅಮಿತ್ ಶಾ ಎಷ್ಟೇ ಬಾರಿ ಬಂದರೂ ಚುನಾವಣಾ ಮೇಲೆ ಪರಿಣಾಮ ಬೀರಲ್ಲ: ಕುಮಾರಸ್ವಾಮಿ
ಹುಬ್ಬಳ್ಳಿ: ಕರ್ನಾಟಕಕ್ಕೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಷ್ಟು ಬಾರಿ ಬರಲಿ, ಪ್ರವಾಸ ಮಾಡಲಿ, ಅದರಿಂದ ಚುನಾವಣೆಯ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ, ಶಾ ಇಬ್ಬರೂ ಕರ್ನಾಟಕದಲ್ಲಿ ಚುನಾವಣೆ ಆಗುವ ಹೊತ್ತಿಗೆ ಹಲವಾರು ಬಾರಿ ಬರಲಿದ್ದಾರೆ. ಅವರು ಬರುವಾಗ ಬ್ರಹ್ಮಾಸ್ತ್ರ, ಸುದರ್ಶನ ಚಕ್ರ ಹಿಡಿದು ಬರ್ತಾರೆ, ಪ್ರತಿಪಕ್ಷಗಳನ್ನ ಮಲಗಿಸ್ತಾರೆ ಎಂದೆಲ್ಲ ಹೇಳಲಾಗುತ್ತಿದೆ. ಆದರೆ ಅದೇನೂ ನಡೆಯಲ್ಲ ಎಂದರು.
ಕೇವಲ ಮೋದಿ ಹಾಗೂ ಅಮಿತಾ ಶಾ ಇವರಿಬ್ಬರನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋದ್ರೆ BJP ಅಧಿಕಾರಕ್ಕೆ ಬರೋಕೆ ಸಾಧ್ಯವಿಲ್ಲ ಎಂದ ಕುಮಾರಸ್ವಾಮಿ, ನಮಗೆ ಟಿಪ್ಪು ಸುಲ್ತಾನ ಬೇಕು, ರಾಣಿ ಅಬ್ಬಕ್ಕ ಬೇಕು. ನಮಗೆ ಸರ್ವಜನಾಂಗದ ಶಾಂತಿಯ ತೋಟ ಬೇಕೋ ಅಥವಾ ಅಶಾಂತಿಯ ತೋಟ ಬೇಕೋ ಎಂಬುದನ್ನು ಜನತೆ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದವರು ಶಾಗೆ ತಿರುಗೇಟು ನೀಡಿದರು.
ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ, ರಾಜ್ಯದಲ್ಲಿ BJP ಅಧಿಕಾರಕ್ಕೆ ಬರಲು ಮುಖ್ಯ ಕಾರಣ ಸಿದ್ದರಾಮಯ್ಯ. ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಮುಗ್ಸಿದ್ದು ಅವರೇ. ಬಿಜೆಪಿ ಅಕ್ರಮಗಳನ್ನೆಲ್ಲ ಹೊರ ತಂದಿದ್ದು ನಾನು, ಸಿದ್ಧರಾಮಯ್ಯ ಅಲ್ಲ ಎಂದರು.