
ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಂದೆಯೇ 'ಮೋದಿ–ಅದಾನಿ ಭಾಯಿ–ಭಾಯಿ' ಎಂದು ಘೋಷಣೆ ಕೂಗಿದ ವಿಪಕ್ಷ ಸದಸ್ಯರು
ನವದೆಹಲಿ: ಅದಾನಿ ವಿವಾದವನ್ನು ಮುಂದಿಟ್ಟುಕೊಂಡು ಮೋದಿ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಆಕ್ರೋಶ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಇಂದು ಕೂಡ ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡುತ್ತಿದ್ದಾಗ ‘ಮೋದಿ–ಅದಾನಿ ಭಾಯಿ–ಭಾಯಿ’ ಎಂಬ ಘೋಷಣೆಗಳನ್ನೂ ಕೂಗುವ ಮೂಲಕ ಕೇಂದ್ರ ಸರಕಾರದ ವಿರುದ್ಧ ಪ್ರತಿಪಕ್ಷಗಳು ಆಕ್ರೋಶ ಹೊರಹಾಕಿವೆ.
ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯಸಭೆಯಲ್ಲಿ ಮಾತನಾಡಲು ಆರಂಭಿಸುತ್ತಿದ್ದಂತೆ ವಿಪಕ್ಷಗಳ ಸಂಸದರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಅದಾನಿ ವಿಚಾರದಲ್ಲಿ ಜಂಟಿ ಸಂಸದೀಯ ಸಮಿತಿ ರಚಿಸುವಂತೆ ಒತ್ತಾಯಿಸಿದ ವಿಪಕ್ಷದ ಸದಸ್ಯರು, ಮೋದಿ-ಅದಾನಿ ಭಾಯಿ ಭಾಯಿ ಎನ್ನುವ ಘೋಷಣೆಗಳೊಂದಿಗೆ ಕಲಾಪಕ್ಕೆ ಅಡ್ಡಿಪಡಿಸಿದರು.
ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ಆರಂಭಿಸುತ್ತಿದ್ದಂತೆ ಘೋಷಣೆ ಕೂಗಲು ಆರಂಭಿಸಿದ ವಿರೋಧ ಪಕ್ಷಗಳ ಸದಸ್ಯರು, ಸದನದ ಬಾವಿಯತ್ತ ಧಾವಿಸಿದರು.
ಈ ಸಂದರ್ಭದಲ್ಲಿ ಅದಾನಿ ವಿರುದ್ಧ ಹಿಂಡೆನ್‌ಬರ್ಗ್ ನೀಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿರುವ ವಂಚನೆ ಹಾಗು ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಿದ ಪ್ರತಿಪಕ್ಷಗಳ ಸದಸ್ಯರು, ‘ವಿ ವಾಂಟ್ ಜೆಪಿಸಿ’ಎಂದು ಘೋಷಣೆ ಕೂಗಿದರು.
ಪ್ರತಿಪಕ್ಷಗಳ ಸದಸ್ಯರ ಘೋಷಣೆಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ನೀವು ಕೆಸರನ್ನು ಎರಚಿದಷ್ಟೂ ಕಮಲ ಅರಳುತ್ತದೆ ಎಂದು ಹೇಳಿ ತನ್ನ ಮಾತನ್ನು ಮುಂದುವರಿಸಿದರು.