ಆಕ್ರಮಣಕಾರರ ಹೆಸರಿರುವ ನಗರ, ಐತಿಹಾಸಿಕ ಸ್ಥಳಗಳಿಗೆ ಮರುನಾಮಕರಣಕ್ಕೆ ಬಿಜೆಪಿ ನಾಯಕ ಸಲ್ಲಿಸಿದ್ದ ಅರ್ಜಿ ವಜಾ; ಸೌಹಾರ್ದತೆಯನ್ನು ಕದಡುವಂತಹ ಹಳೆಯ ಸಂಗತಿಗಳನ್ನು ಕೆದಕಬೇಡಿ, ದೇಶವನ್ನು ಉದ್ವಿಗ್ನಗೊಳಿಸಬೇಡಿ ಎಂದ 'ಸುಪ್ರೀಂ'
Monday, February 27, 2023
ಹೊಸದಿಲ್ಲಿ: 'ಆಕ್ರಮಣಕಾರರ' ಹೆಸರುಗಳನ್ನು ಹೊಂದಿರುವ ಎಲ್ಲ ನಗರಗಳು ಹಾಗು ಐತಿಹಾಸಿಕ ಸ್ಥಳಗಳಿಗೆ ಮರುನಾಮಕರಣ ಮಾಡಬೇಕು ಎಂದು ಕೋರಿ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಹಾಗು ಬಿ.ವಿ.ನಾಗರತ್ನ ಅವರ ಪೀಠವು ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಉದ್ದೇಶವನ್ನು ಪ್ರಶ್ನಿಸಿದ್ದು, “ದೇಶದಲ್ಲಿ ಉದ್ವಿಗ್ನವನ್ನುಂಟು ಮಾಡುವ” ಸಮಸ್ಯೆಗಳನ್ನು ಇದು ಮತ್ತೆ ಜೀವಂತಗೊಳಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಹಿಂದೂಯಿಸಂ ಎಂದರೆ ಒಂದು ಧರ್ಮವಲ್ಲ ಆದರೆ ಒಂದು ಜೀವನ ಕ್ರಮವಾಗಿದೆ. ಹಿಂದೂಯಿಸಂ ಎಂದರೆ ಒಂದು ಜೀವನ ವಿಧಾನವಾಗಿದೆ. ಹಿಂದೂ ಧರ್ಮದಲ್ಲಿ ಯಾವುದೇ ಮತಾಂಧತೆ ಇಲ್ಲ, ಸೌಹಾರ್ದತೆಯನ್ನು ಕದಡುವಂತಹ ಹಳೆಯ ಸಂಗತಿಗಳನ್ನು ಕೆದಕಬೇಡಿ, ದೇಶವನ್ನು ಉದ್ವಿಗ್ನಗೊಳಿಸಬೇಡಿ ಎಂದು ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.