ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಬಿಡುಗಡೆ ಮಾಡಿದ ಮೋದಿ: ಬೆಳಗಾವಿಯಲ್ಲಿ ರೋಡ್ ಶೋ
ಬೆಳಗಾವಿ: ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣವನ್ನು ಫಲಾನುಭವಿ ರೈತರಿಗೆ ಬಿಡುಗಡೆ ಮಾಡಿದ್ದಾರೆ.
ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ಆಯೋಜಿಸಲಾದ ಸಮಾವೇಶದಲ್ಲಿ ಪ್ರಧಾನಿ ಮೋದಿ 16 ಸಾವಿರ ಕೋಟಿ ರೂಗೂ ಹೆಚ್ಚು ಮೊತ್ತದ ಹಣವನ್ನು ಬಿಡುಗಡೆ ಮಾಡಿದ್ದಾರೆ.
ಹಣ ಬಿಡುಗಡೆಯಾಗಿರುವುದರಿಂದ ಒಟ್ಟು 8 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ತಲಾ 2 ಸಾವಿರ ರೂ ಜಮೆಯಾಗಲಿದೆ. ಕರ್ನಾಟಕದಲ್ಲಿ PM ಕಿಸಾನ್ ಯೋಜನೆಯ 49 ಲಕ್ಷ ಫಲಾನುಭವಿಗಳಿಗೆ ಪ್ರಧಾನಿ ಮೋದಿ ಉಡುಗೊರೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ನರೇಂದ್ರ ಮೋದಿ, ದೇಶದ ಎಲ್ಲಾ ಫಲಾನುಭವಿ ರೈತರ ಖಾತೆಗಳಿಗೆ ಮಧ್ಯವರ್ತಿಗಳ ಕಾಟ ಇಲ್ಲದೇ ನೇರವಾಗಿ ಹಣ ವರ್ಗಾವಣೆ ಆಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಕೋಟಿ ಹಣ ಬಿಡುಗಡೆ ಮಾಡಿದರೂ ಪೂರ್ಣವಾಗಿ ಯಾವ ರೈತರ ಕೈಗೂ ತಲುಪುತ್ತಿರಲಿಲ್ಲ ಎಂದರು.
ದೇಶದ ಮುಂದಿನ ಭವಿಷ್ಯದ ದೃಷ್ಟಿಯಿಂದ ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕೆ 1 ಲಕ್ಷ ಕೋಟಿಗೂ ಹೆಚ್ಚು ಅನುದಾನ ಮೀಸಲಿಡಲಾಗಿದೆ. ರೈತರಿಗೆ PM ಪ್ರಮಾಣ್ ಸೇರಿದಂತೆ ಹಲವು ಯೋಜನೆಗಳನ್ನು ನಾವು ಪ್ರಕಟಿಸಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ ಮೊದಲಾದ ಹಾಜರಿದ್ದರು.
ಈ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ಮೋದಿ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿ, ಬಳಿಕ ಬೆಳಗಾವಿಯಲ್ಲಿ ರೋಡ್ಶೋ ಕೂಡ ನಡೆಸಿದರು.