ನನ್ನ ಮೋನಾಕರಿಗೆ ಗೌರವ ಡಾಕ್ಟರೇಟ್!!

ನನ್ನ ಮೋನಾಕರಿಗೆ ಗೌರವ ಡಾಕ್ಟರೇಟ್!!

-ಡಿ‌.ಐ. ಅಬೂಬಕರ್ ಕೈರಂಗಳ

ನಾನಿಂದು ಹರ್ಷಪುಳಕಿತನಾಗಿದ್ದೇನೆ. ನನಗೇ ಡಾಕ್ಟರೇಟ್ ಬಂದಂತಹ  ಸಂತೋಷ. ಆ ಸುದ್ಧಿ ತಿಳಿದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ.   ನಾನು ಮತ್ತು ಕಣಚೂರು ಮೋನು ಹಾಜಿಯವರದ್ದು 35 ವರ್ಷಗಳ ಬಾಂಧವ್ಯ. ನನ್ನ ಹದಿನೇಳನೆಯ ಪ್ರಾಯದಲ್ಲೇ ಅವರ ಗೆಳೆತನ ಆರಂಭವಾಗಿತ್ತು. 

ಅಲ್ ಅನ್ಸಾರ್, ಮೌಲಾಂಜಿ, ಮದರಂಗಿ ಪತ್ರಿಕೆಗಳು ಹಾಗೂ ಇದೀಗ ಆ್ಯಕ್ಷಿಬ್ಲೂ ಕುಡಿಯುವ ನೀರಿನ ಕಂಪೆನಿಯ ಜನರಲ್ ಮ್ಯಾನೇಜರ್ ಹುದ್ದೆಯ ವರೆಗೂ ನಮ್ಮಿಬ್ಬರ ನಂಟು ಅಸ್ಖಲಿತ. 

ಪತ್ರಿಕಾ ರಂಗದಲ್ಲಿ ದುಡಿಯುತ್ತಿದ್ದಾಗ ನೀವು ಏನಾದರೊಂದುಉದ್ಯಮ ಆರಂಭಿಸಬೇಕು ಎಂದು ಅನೇಕ ಬಾರಿ ಸಲಹೆ ಕೊಟ್ಟಿದ್ದರು. ನಾನು ಮನ್ಸೂರ್ ಹಾಜಿಯವರ ಆ್ಯಕ್ಸಿಬ್ಲೂ ಕಂಪೆನಿಗೆ ಸೇರುವ ವಿಷಯದಲ್ಲಿ ಅವರ ಸಲಹೆ ಕೇಳಿದ್ದೆ. ನನ್ನ ಯಾವುದೇ ಕಾರ್ಯವಿದ್ದರೂ ಅವರೊಡನೆ ಸಲಹೆ ಕೇಳುವುದು ವಾಡಿಕೆಯಾಗಿತ್ತು. ನಿರ್ಮಲ ಚಿತ್ತರಾಗಿ ಅತ್ಯುತ್ತಮ ಸಲಹೆ ಕೊಡುತ್ತಲೂ ಇದ್ದರು. ಹಾಗೆ ಮನ್ಸೂರ್ ಅಹ್ಮದ್ ಆಝಾದ್ ರವರ ಆ್ಯಕ್ಸಿಬ್ಲೂ ನೀರಿನ ಕಂಪೆನಿ ಸೇರುವ ವಿಷಯದಲ್ಲಿ ಸಲಹೆ ಕೇಳಿದಾಗ; ಮನ್ಸೂರ್ ಹಾಜಿ ಚತುರ ವ್ಯವಹಾರಿ, ಸಂಭಾವಿತ, ಅವರ ಬಳಿ ದುಡಿದರೆ ನಿಮಗೆ ಯಶಸ್ಸು ಖಂಡಿತ ಅಂದಿದ್ದರು. ಅವರ ಆ ಮಾತು ಅಕ್ಷರಶಃ ನಿಜವಾಗಿತ್ತು. ಆ್ಯಕ್ಸಿ ಬ್ಲೂ ಕಂಪೆನಿಯಲ್ಲಿ ಇದೀಗ ಆರು ವರ್ಷದಲ್ಲಿ ನನ್ನ ಸೇವೆ ಮುಂದುವರಿದಿದೆ. ನಾನು ಇಂದು ಒಂದು ಸ್ಥಿರವಾದ ನೆಲೆಯಲ್ಲಿ ಇರುವಂತಾಗಲು ನನಗೆ ಈ ಕಂಪೆನಿಯ ಹುದ್ದೆ ಕಾರಣವಾಯಿತು.

 ನಿಜಕ್ಕೂ ಕಣಚೂರು ಮೋನು ಹಾಜಿಯವರು ಓರ್ವ ಭಾಗ್ಯಶಾಲಿ. ಅವರು ಯಾವುದೇ ಯೋಜನೆಯಲ್ಲೂ ಯಶಸ್ಸು ಮಾತ್ರ ಕಂಡವರು. 

" ಕಣಚೂರು ಮೋನು ಮುಟ್ಟಿದ್ದೆಲ್ಲ ಜೇನು" ಎಂದು ಕವಿ ಇದ್ದಿನಬ್ಬನವರು ಹೇಳಿದ್ದು ಅಕ್ಷರಾರ್ಥ ನಿಜ. 

 ಮೋನು ಹಾಜಿಯವರು ಆರಂಭದಲ್ಲಿ ಶಾಲೆ ಕಟ್ಟಿಸಿ ಇದೀಗ ಒಂದು ಪ್ರತಿಷ್ಠಿತ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮಾಲಿಕ‌.  ಹಲವಾರು ಉದ್ಯಮಗಳ ಅಧಿಪತಿ. ಇದೆಲ್ಲವೂ ಅವರ ಸ್ವಂತ  ಪರಿಶ್ರಮದ ಸಂಪಾದನೆ. ಬಹುತೇಕ ಶ್ರೀಮಂತರಿಗೆ 

ಒಂದು ಆರ್ಥಿಕ ಬ್ಯಾಕ್ ಗ್ರೌಂಡು  ಇರುತ್ತದೆ, ಪಿತ್ರಾರ್ಜಿತ ಆಸ್ತಿಗಳಿರುತ್ತವೆ. ಆದರೆ ಮೋನು ಹಾಜಿಯವರಿಗೆ ಅಂತಹದ್ದೇನೂ ಇಲ್ಲ.  ಅವರು ಝೀರೋದಿಂದ ಹೀರೋ ! 

 " ಕಣಚೂರು  ಎಂಬ ಇವರು  ಉದ್ಯಮ ಆರಂಭಿಸಿದ್ದ  ಕುಗ್ರಾಮ ಕಣಚೂರು ಇಂದು ವಿಶ್ವದ ಭೂಪಟದಲ್ಲಿ ಗುರುತಿಸುವಂತಾಗಿದೆ , ಇದಕ್ಕೆ ಕಾರಣ ಮೋನುಹಾಜಿಯವರು.  "ನಾವು ಇದ್ದಲ್ಲೇ ಇದ್ದೇವೆ, ಮೋನು ಹಾಜಿ  ಬಾನೆತ್ತರಕ್ಕೆ ಏರಿದರು"  ಎಂದೊಮ್ಮೆ ನಾವು ಕಣಚೂರಿಗೆ  ಹೋಗಿದ್ದಾಗ ಆ ಊರವರು  ಮನತುಂಬಿ ಹೇಳುವುದನ್ನು ಕೇಳಿದ್ದೇನೆ‌. 

ನಾನೊಮ್ಮೆ ಕವಿ, ಸಾಹಿತಿ ಮುಳಿಯ ಶಂಕರ ಭಟ್ಟರ ಜೊತೆಗೆ ಮಾಜಿ ಲೋಕಸಭಾ ಉಪಾಧ್ಯಕ್ಷ  ಹಾಗೂ ಮಾಜಿ ಕಾನೂನು ಸಚಿವರಾದ ಡಿ. ಬಿ. ಚಂದ್ರಶೇಖರ್ ರನ್ನು ಭೇಟಿಯಾದಾಗ ಚಂದ್ರೇಗೌಡರು ಮೋನು ಹಾಜಿಯವರನ್ನು ಪ್ರಶಂಸಿದ್ದರು.  ಮೋನು ಅಂದರೆ ನಿಮ್ಮ ಭಾಷೆಯಲ್ಲಿ ಮಗು ಎಂದರ್ಥ. ನಿಜಕ್ಕೂ ಮೋನು ಮಗುವಿನ ಹಾಗೆ ಶುದ್ಧ ಮನಸ್ಕರು.  ಅವರಿಗೆ ಡಾಕ್ಟರೇಟ್ ಸಿಗಬೇಕಿತ್ತು ಅಂದಿದ್ದರು. ಅವರ ಆ ಮಾತು ಇಂದು ನಿಜವಾಗಿದೆ.

 ಮೋನು ಹಾಜಿಯವರಿಗೆ ಡಾಕ್ಟರೇಟ್ ಪದವಿ ನಿಜಕ್ಕೂ ಅರ್ಹತೆಗೆ ಸಂದ ಸ್ಥಾನವಾಗಿದೆ. ಸಾಧನೆಗೆ ದೊರೆತ ಫಲವಾಗಿದೆ. ಕಳೆದ 41 ವರ್ಷಗಳಿಂದ ಮುಸ್ಲಿಮರೊಬ್ಬರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ  ಈ ಪದವಿ ಸಿಗುತ್ತಿರುವುದು ಇದೇ ಮೊದಲು‌‌. 

ನನ್ನ ಮೋನಾಕನವರಿಗೆ    ಹೃದಯ ತುಂಬಿದ ಅಭಿನಂದನೆಗಳು. ಅವರಿಗೆ ಇನ್ನಷ್ಟು ಯಶ ಸಿಗಲಿ.

Ads on article

Advertise in articles 1

advertising articles 2

Advertise under the article