ಸುಳ್ಳಿನ ಮೇಲೆ ಕಟ್ಟಿರುವುದೇ ಹಿಂದುತ್ವ; ಹಿಂದುತ್ವ ಬೇರೆ ಹಿಂದೂ ಧರ್ಮ ಬೇರೆ: ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬರುತ್ತಿದ್ದಂತೆಯೇ ಗುಡುಗಿದ ನಟ ಚೇತನ್
ಬೆಂಗಳೂರು: ಸುಳ್ಳಿನ ಮೇಲೆ ಕಟ್ಟಿರುವುದೇ ಹಿಂದುತ್ವ. ಹಿಂದುತ್ವ ಬೇರೆ ಹಿಂದೂ ಧರ್ಮ ಬೇರೆ, ಪ್ರತ್ಯೇಕ ಲಿಂಗಾಯತ ಧರ್ಮದ ರೀತಿ ಪ್ರತ್ಯೇಕ ಧರ್ಮ ಮಾಡುವುದಾದರೆ ಹೇಳಿ ನಾವು ನಿಮ್ಮೊಂದಿಗೆ ಬರುತ್ತೇವೆ, ಹಿಂದೂನೂ ನೀವೇ, ಹಿಂದುತ್ವವೂ ನೀವೇ ಅಂತ ಧರ್ಮ ಹೈಜಾಕ್ ಮಾಡಲು ಬಿಡಲ್ಲ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ನಟ ಚೇತನ್ ಅಹಿಂಸಾ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಂಘಪರಿವಾರದ ವಿರುದ್ಧ ಸಾಮಾಜಿಕ ತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಅವರು, ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರ ಬರುತ್ತಿದ್ದಂತೆಯೇ ತಮ್ಮ ಹೋರಾಟದ ಮಾತನ್ನು ಮಾಧ್ಯಮದ ಮುಂದಿಡಿಟ್ಟಿದ್ದಾರೆ.
ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನು ಕೊಂಡಿದ್ದಾರೆ ಎಂಬುದು ಸುಳ್ಳು. ಉರಿಗೌಡ ಮತ್ತು ನಂಜೇಗೌಡ ಎಂಬುದು ಕಾಲ್ಪನಿಕ ವ್ಯಕ್ತಿಗಳು ಎಂಬುದನ್ನು ಇತಿಹಾಸ ತಜ್ಞರು, ಬುದ್ಧಿವಂತರು, ವಿಚಾರವಂತರು ಎಲ್ಲರೂ ಈಗಾಗಲೇ ಹೇಳಿದ್ದಾರೆ. ಜೊತೆಗೆ ಈ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದ ಅವರು, ಉರಿಗೌಡ ಮತ್ತು ನಂಜೇಗೌಡ ಎಂಬುದು ಒಕ್ಕಲಿಗರು ಮತ್ತು ಮುಸಲ್ಮಾನರ ಮಧ್ಯೆ ದ್ವೇಷ ಬಿತ್ತುವ ಪ್ರಯತ್ನವಾಗಿದೆ. ಇದನ್ನು ನಾವು ಯಾವುದೇ ಕಾರಣಕ್ಕೂ ಆಗಲು ಬಿಡಲ್ಲ ಎಂದರು.
ಟಿಪ್ಪು ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಆತ ಅದ್ಬುತ ಕೆಲಸ ಕಾರ್ಯಗಳನ್ನು ಮಾಡಿದ್ದಾನೆ. ಆತ ಹಲವಾರು ಸುಧಾರಣೆಗಳನ್ನು ತಂದಿದ್ದ ಎಂದರು.
ಈ ರೀತಿ ತನ್ನನ್ನು ಪದೇ ಪದೇ ಬಂಧನ ಮಾಡುತ್ತಿರುವುದು ನನ್ನನ್ನು ಹಾಗು ನನ್ನ ಜೊತೆ ಇರುವ ಸಮಾನತಾವಾದಿಗಳನ್ನು ಕುಗ್ಗಿಸುವ ಪ್ರಯತ್ನವಾಗಿದೆ. ನಾವು ಸತ್ಯ ಹೇಳಿದರೆ ನಮ್ಮನ್ನು ಜೈಲಿಗೆ ಹಾಕುತ್ತಿದ್ದಾರೆ. ನಮ್ಮ ವಿಚಾರದಲ್ಲಿ ಸೋಲಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ನಮ್ಮನ್ನು ಜೈಲಿಗೆ ಹಾಕುತ್ತಿದ್ದಾರೆ. ಅವರಲ್ಲಿ ವಿಚಾರವಿಲ್ಲ, ಅವರಲ್ಲಿ ಬರೀ ಸುಳ್ಳು, ದ್ವೇಷ, ಅಸಮಾನತೆ, ಹಿಂಸೆ ಇದೆ ಎಂದು ಚೇತನ್ ಹೇಳಿದರು.
ಸಮಾನತೆಗಾಗಿ ತಾನು ಎಷ್ಟು ಸಲ ಬೇಕಾದರೂ ಜೈಲಿಗೆ ಹೋಗಲು ಸಿದ್ಧನಾಗಿದ್ದೇನೆ. ಕಳೆದ ಬಾರಿ ಟ್ವೀಟ್ ಮಾಡಿದ್ದಕ್ಕೆ 7 ದಿನ ಜೈಲಿಗೆ ಹಾಕಿದ್ದರು. ಈ ಬಾರಿ ಟ್ವೀಟ್ ಮಾಡಿದಕ್ಕೆ 3 ದಿನ ಬಂಧನ ಮಾಡಿದ್ದಾರೆ. ನಮ್ಮಂಥ ಹೋರಾಟಗಾರರು ಸೆರೆಮನೆಯನ್ನೇ ಅರಮನೆ ಅಂತ ತಿಳಿದುಕೊಳ್ಳಬೇಕು ಎಂದರು.