ಇನಾಯತ್ ಅಲಿ ನೇತೃತ್ವದಲ್ಲಿ ಮುಂದುವರಿದ ಬಿರುಸಿನ ಕಾಂಗ್ರೆಸ್ ಗ್ಯಾರಂಟಿ ನೋಂದಣಿ ಅಭಿಯಾನ; ಅಭಿಯಾನಕ್ಕೆ ಕಾಟಿಪಳ್ಳದಲ್ಲಿ ವ್ಯಾಪಕ ಜನ ಬೆಂಬಲ
ಮಂಗಳೂರು: ಕಳೆದ ಎರಡು ವಾರಗಳಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ನೇತೃತ್ವದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿರುವ ಗೃಹಲಕ್ಷ್ಮಿ, ಗೃಹಜ್ಯೋತಿ ಹಾಗೂ ಅನ್ನ ಭಾಗ್ಯ ಗ್ಯಾರಂಟಿಗಳ ನೋಂದಣಿ ಅಭಿಯಾನ ಭರದಿಂದ ಸಾಗುತ್ತಿದ್ದು, ಅದರಂತೆ ಅಭಿಯಾನವು ಗುರುವಾರ ಸುರತ್ಕಲ್ ಕಾಟಿಪಳ್ಳ ವ್ಯಾಪ್ತಿಯಲ್ಲಿ ಭರ್ಜರಿಯಾಗಿ ನಡೆಯಿತು.
ಬೆಳಿಗ್ಗೆ ಆರಂಭವಾದ ಅಭಿಯಾನದ ಜೊತೆ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಬಾರಿ ಸಂಖ್ಯೆಯಲ್ಲಿ ಕೈಜೋಡಿದ್ದು, ಮನೆಮನೆಗೆ ತೆರಳಿ ಕಾಂಗ್ರೆಸ್ ಗ್ಯಾರಂಟಿಗಳ ನೋಂದಣಿ ಮಾಡಿದರು.
ಈ ಸಂಧರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಇನಾಯತ್ ಅಲಿ, ರಾಜ್ಯದಲ್ಲಿ ತಾಂಡವವಾಡುತ್ತಿರುವ ವ್ಯಾಪಕ ಭ್ರಷ್ಟಾಚಾರ, ನಿರುದ್ಯೋಗ ಸಮಸ್ಯೆ, ಅವೈಜ್ಞಾನಿಕ ತೆರಿಗೆ ನೀತಿಗಳಿಂದ ಜನರ ಬದುಕು ದುಸ್ತರವಾಗಿದ್ದು, ಇದಕ್ಕೆಲ್ಲದಕ್ಕೂ ಪರಿಹಾರ ಎಂಬಂತೆ ಜನರು ಕಾಂಗ್ರೆಸ್ ಪಕ್ಷದ ಮೇಲೆ ಭಾರೀ ನಿರೀಕ್ಷೆ ಮತ್ತು ಭರವಸೆ ಇಟ್ಟುಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ನಾವು ಮನೆಗೆ ಭೇಟಿ ನೀಡುತ್ತಿರುವ ಸಂಧರ್ಭದಲ್ಲಿ ಆರ್ಥಿಕವಾಗಿ ಕಂಗೆಟ್ಟಿರುವ ಜನರು ನಮ್ಮಲ್ಲಿ ಬಿಜೆಪಿ ಸರಕಾರದ ದುರಾಡಳಿತದ ವಿರುದ್ಧ ಆಕ್ರೋಶ ವ್ಯಕಪಡಿಸುತ್ತಿದ್ದಾರೆ. ಬಿಜೆಪಿಯ ಸರ್ವಾಧಿಕಾರಿ ಆಡಳಿತಕ್ಕೆ ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಪ್ರಥ್ವಿರಾಜ ಆರ್.ಕೆ, ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ, ಕಾಟಿಪಳ್ಳ ವಾರ್ಡ್ ಅಧ್ಯಕ್ಷ ನಿತ್ಯಾನಂದ, ಮಾಜಿ ಕಾರ್ಪೊರೇಟರ್ ಸುಂದರ ಶೆಟ್ಟಿ ಹಾಗೂ ಸವಿತಾ ಶೆಟ್ಟಿ, ಬ್ಲಾಕ್ ಇಂಟಕ್ ಘಟಕದ ಅಧ್ಯಕ್ಷ ಥೋಮಸ್, ವಿಠ್ಠಲ ಶೆಟ್ಟಿ, ಶಮೀರ್ ಕಾಟಿಪಳ್ಳ, ಬಾಷ ಗುರುಪುರ, ಜಲೀಲ್ ಬದ್ರಿಯಾ, ಮುಫೀದ್ ಅಡ್ಯಾರ್, ಸತ್ತಾರ್ ಕೃಷ್ಣಾಪುರ, ನಝೀರ್ ಕಾಟಿಪಳ್ಳ ಹಾಗೂ ಇನ್ನಿತರರು ಉಪಸ್ಥಿತರಿದ್ದರು.