ತಮಿಳುನಾಡು BJP ಅಧ್ಯಕ್ಷ ಕೆ.ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲು: ಧೈರ್ಯವಿದ್ದರೆ ನನ್ನನ್ನು ಬಂಧಿಸಿ ಎಂದು ಸವಾಲು ಹಾಕಿದ ಅಣ್ಣಾಮಲೈ
ಚೆನ್ನೈ: ತಮಿಳುನಾಡು BJP ಅಧ್ಯಕ್ಷ ಕೆ.ಅಣ್ಣಾಮಲೈ ವಿರುದ್ಧ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾದ ವಲಸೆ ಕಾರ್ಮಿಕರ ಸಮಸ್ಯೆಗೆ ಸಂಬಂಧಿಸಿದಂತೆ ಪ್ರಚೋದನಕಾರಿ ಭಾಷಣಕ್ಕಾಗಿ ಚೆನ್ನೈನ ಸೆಂಟ್ರಲ್ ಕ್ರೈಮ್ ಬ್ರಾಂಚ್ (CCB) ಸೈಬರ್ ಕ್ರೈಂ ವಿಭಾಗ ರವಿವಾರ ಪ್ರಕರಣ ದಾಖಲಿಸಿದೆ.
ಗುಂಪುಗಳ ನಡುವೆ ಹಿಂಸಾಚಾರ ಪ್ರಚೋದನೆ ಹಾಗೂ ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ ಅಣ್ಣಾಮಲೈ ವಿರುದ್ಧ 4 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಲಸೆ ಕಾರ್ಮಿಕರ ಸಮಸ್ಯೆಯ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದ ಅಣ್ಣಾಮಲೈ, ವಲಸೆ ಕಾರ್ಮಿಕರು ತಮಿಳುನಾಡಿನಲ್ಲಿ ಸುರಕ್ಷಿತರಾಗಿದ್ದಾರೆ. ಆದರೆ CM ಎಂಕೆ ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ ಹಾಗೂ ಅದರ ಮಿತ್ರ ಪಕ್ಷದ ನಾಯಕರು ಅವರ ವಿರುದ್ಧದ ದ್ವೇಷ ಕಾರುತ್ತಿದ್ದಾರೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದರು.
ತಮ್ಮ ಮೇಲೆ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಅಣ್ಣಾಮಲೈ, ಉತ್ತರ ಭಾರತದ ಸಹೋದರರ ವಿರುದ್ಧ ಅವರ 7 ದಶಕಗಳ ಪ್ರಚಾರವನ್ನು ಬಹಿರಂಗಪಡಿಸಿದ್ದಕ್ಕಾಗಿ DMK ನನ್ನ ವಿರುದ್ಧ ಪ್ರಕರಣಗಳನ್ನು ದಾಖಲಿಸಿದೇ. ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ನೀವು ಪ್ರಜಾಪ್ರಭುತ್ವವನ್ನು ಹತ್ತಿಕ್ಕಬಹುದು ಎಂದು ಭಾವಿಸಿದ್ದೀರಿ, ನಾನು ನಿಮಗೆ 24 ಗಂಟೆ ಸಮಯ ಕೊಡುತ್ತೇನೆ, ಧೈರ್ಯವಿದ್ದರೆ ನನ್ನನ್ನು ಬಂಧಿಸಿ ಎಂದು ಸವಾಲು ಹಾಕಿದ್ದಾರೆ.